12
September, 2026

A News 365Times Venture

12
Saturday
September, 2026

A News 365Times Venture

ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ನ.1ರೊಳಗೆ ಸರ್ಕಾರಕ್ಕೆ ಒಪ್ಪಿಸಿ: ಸಿಎಂ ಡಿ.ಕೆ ಶಿವಕುಮಾರ್ ಡೆಡ್ ಲೈನ್

Date:

ಬೆಂಗಳೂರು, ಸೆಪ್ಟಂಬರ್,11,2026 (www.justkannada.in): “ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ‌ ಇಲ್ಲದ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಡೆಡ್ ಲೈನ್ ಕೊಟ್ಟರು.

ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಸಿಎಂ ಡಿಕೆ  ಶಿವಕುಮಾರ್ ಅವರು ಮಾತನಾಡಿದರು.

“ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ” ಎಂದು ಸಂದೇಶ ನೀಡಿದರು.

“ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿ ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ” ಎಂದರು.

ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳ ಭತ್ಯೆ ಬಗ್ಗೆ ಶೀಘ್ರ ತೀರ್ಮಾನ

“ದೇಶದ ಅರಣ್ಯ ಸಂಪತ್ತನ್ನು ಕಾಪಾಡುವವರು ನೀವು.‌ ವನ್ಯಜೀವಿಗಳ ಜೊತೆ ಸಂಘರ್ಷ ಏರ್ಪಟ್ಟು ಅನೇಕ ಸಿಬ್ಬಂದಿಗಳು ಪ್ರಾಣ ತ್ಯಾಗ ಮಾಡಿದ್ದಾರೆ.‌ ಇಲಾಖೆಯ ಸಿಬ್ಬಂದಿಗಳ ಭತ್ಯೆಯ ವಿಚಾರವಾಗಿ ಸಚಿವರ ಮನವಿಯ ಬಗ್ಗೆ ಆಲೋಚಿಸಲಾಗುವುದು. ಆರ್ಥಿಕ ಇಲಾಖೆಯ ಬಳಿ ಚರ್ಚೆ ನಡೆಸಿ ಪೊಲೀಸ್ ಇಲಾಖೆಯನ್ನೂ ಒಳಗೊಂಡಂತೆ ಒಟ್ಟಾಗಿ ತೀರ್ಮಾನ ಮಾಡಲಾಗುವುದು” ಎಂದರು.

“ಅರಣ್ಯಕ್ಕೂ ನನಗೂ ಬಹಳ ಹತ್ತಿರದ ಸಂಬಂಧ. ನನ್ನ ಊರು, ಮನೆ, ಕ್ಷೇತ್ರ ಬದುಕು ಎಲ್ಲವೂ ಅರಣ್ಯಕ್ಕೆ ಹೊಂದಿಕೊಂಡೇ ಇದೆ. ಅರ್ಕಾವತಿಯಲ್ಲಿ ಮಹಶೀರ್ ಮೀನುಗಳಿದ್ದವು ನಾನೂ ಸಹ ಮೀನಿಗೆ ಗಾಳ ಹಾಕಿ ಕುಳಿತುಕೊಳ್ಳುತ್ತಿದ್ದೆ” ಎಂದರು.

“ಈ ಕಾರಣಕ್ಕೆ ನನಗೂ ಅರಣ್ಯ ಮಂತ್ರಿ ಆಗುವ ಆಸೆಯಿತ್ತು. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಅವಕಾಶ ಕೇಳಿದ್ದೆ. ಆದರೆ ಅವರು ಕೃಷಿ ಸಚಿವನನ್ನಾಗಿ ಮಾಡಿದರು. ನಂತರ ಮನಸ್ಸು ಬದಲಾಯಿಸಿ ಕೃಷಿ ಇಲಾಖೆಯನ್ನು ಜಯಚಂದ್ರ ಅವರಿಗೆ ನೀಡಿ, ನನಗೆ ಸಹಕಾರ ಇಲಾಖೆ ನೀಡಿದರು. ನನಗಾಗ 38 ವರ್ಷ. ಸಚಿವ ಸಂಪುಟ ವಿಸ್ತರಣೆ ಆದಾಗಲೂ ಅರಣ್ಯ ಇಲಾಖೆ ನೀಡದೆ ನಗರಾಭಿವೃದ್ಧಿ ಇಲಾಖೆ ನೀಡಿದರು. ಇದೇ ವೇಳೆಯಲ್ಲಿ ರಾಜಕುಮಾರ್ ಅವರ ಅಪಹರಣ ಘಟನೆ ನಡೆಯಿತು” ಎಂದು ಮೆಲುಕು ಹಾಕಿದರು.

ಅರಣ್ಯ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳ ಪರವಾಗಿ ನಿಲ್ಲಿ

“ಜನ ಸಾಮಾನ್ಯರು ಪೊಲೀಸರನ್ನು ಒಪ್ಪಿಕೊಳ್ಳುತ್ತಾರೆ.‌ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಪ್ಪುವುದಿಲ್ಲ. ಅರಣ್ಯ ಅಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಅರಣ್ಯ ಒತ್ತುವರಿ ಇಂದು ನೆನ್ನೆಯದಲ್ಲ. ಅದನ್ನು ಕಾನೂನು ಪ್ರಕಾರ ಅದನ್ನು ಬಗೆಹರಿಸೋಣ. ಜನರ ಮೇಲೆ ಒತ್ತಡ ಹೇರಬೇಡಿ. ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲವೊಂದು ವಿಚಾರದಲ್ಲಿ ಅತಿಯಾಗಿ ವರ್ತಿಸುತ್ತೀರಿ. ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಬರಬಾರದು. ಕೆಲವೊಂದು ವಿನಾಯಿತಿಗಳನ್ನು ನೀಡಬೇಕು” ಎಂದರು.

“ಈ ಭೂಮಿ ನಮಗೆ ಸೇರಿದ್ದಲ್ಲ. ಆದರೆ ಭೂಮಿ ಕಾಪಾಡಬೇಕಿರುವುದು ನಮ್ಮ ಕರ್ತವ್ಯ. ಎಷ್ಟೇ ದೊಡ್ಡವರಾದರೂ ಕೊನೆಗೆ ಭೂಮಿಗೆ ಸೇರುತ್ತೇವೆ. ಚಿತೆಯಲ್ಲಿ ಸುಡುವ ಮರವೂ ಭೂಮಿ ಮೇಲೆಯೇ ಬೆಳೆಯುತ್ತದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಈ ಇಲಾಖೆಯಲ್ಲಿದ್ದಾರೆ. ಇವರಿಂದ ಅನೇಕ ಕಡೆ ಕಾಡು ಸುರಕ್ಷಿತವಾಗಿದೆ” ಎಂದರು.

ತೇಗದ ಸಿರಿ ಯೋಜನೆ ಯಶಸ್ಸಿಗೆ ಶ್ರಮಿಸಿ

“ತೇಗದ ಸಿರಿ ಯೋಜನೆ ಯಶಸ್ಸಿಗೆ ಅರಣ್ಯ ಅಧಿಕಾರಿಗಳು ಕೆಲಸ ಮಾಡಬೇಕು. ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತದೆ. ಅರಣ್ಯ ಇಲಾಖೆಯ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಕಡೆ ಎಲ್ಲರೂ ಗಮನ ಹರಿಸಬೇಕು. ಕೆ ಎಚ್ ರಂಗನಾಥ್ ಅವರು ಇಲಾಖೆ ಸಚಿವರಾಗಿದ್ದಾಗ ಶ್ರೀಗಂಧವನ್ನು ಖಾಸಗಿ ಜಮೀನಿನಲ್ಲೂ ಬೆಳೆಯಲು ಅವಕಾಶ ನೀಡಿದರು” ಎಂದು ಹೇಳಿದರು.

“ಕಸ್ತೂರಿ ರಂಗನ್ ವರದಿಯನ್ನು ಮೂರು- ನಾಲ್ಕು ಸಲ ವಾಪಸ್ ಕಳುಹಿಸಿದೆವು. ನಮಗೊಂದು ನ್ಯಾಯ, ಕೇರಳಕ್ಕೆ ‌ಒಂದು ನ್ಯಾಯ ನೀಡಲಾಗಿದೆ. ಇದರ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಲಾಗುತ್ತದೆ” ಎಂದರು.

“ಕಬಿನಿಗೆ ತೆರಳಿದಾಗ ಅಲ್ಲಿನ ವನ್ಯಜೀವಿ ಸಂಪತ್ತು ನೋಡಿ ಬೆರಗಾಗಿ ಹೋದೆ. ಕೆಲವೇ ಹೊತ್ತಿನಲ್ಲಿ 250 ಕ್ಕೂ ಹೆಚ್ಚು ಆನೆಗಳನ್ನು ನೋಡಿದೆ. ಅಷ್ಟು ಸಂಪತ್ಬರಿತವಾಗಿ ನಮ್ಮ ನಾಡಿನ ವನ್ಯಜೀವಿ ಸಂಪತ್ತಿದೆ. ಇಂದಿರಾಗಾಂಧಿ ಅವರು ಸಹ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದರು. ನಮ್ಮ ಊರಿನ ಬಳಿಯ ಶಿವಾಲ್ದಪ್ಪನ ಬೆಟ್ಟದಲ್ಲಿ ಬಿದಿರು ಹೆಚ್ಚು ಬೆಳೆಯುತ್ತಿದ್ದರು. ಅದನ್ನು ಬಳಸಿ ಜನ ಬಿದಿರು ಬುಟ್ಟಿಗಳನ್ನು ಹೆಣೆಯುತ್ತಿದ್ದರು. ಮನುಷ್ಯನಿಗೂ ಹಸಿರಿಗೂ ವಿಶೇಷ ಸಂಬಂಧವಿದೆ” ಎಂದರು.

“ಅರಣ್ಯ ಇಲಾಖೆಯ ಉನ್ನತ ಅಧಿಕಾರಿ ಕಚೇರಿಯಲ್ಲಿದ್ದ ಇದ್ದಂತಹ ದಂತವನ್ನೇ ಈ ಹಿಂದೆ ಕದ್ದಿದ್ದರು. ನಾನು ವಾಸವಿದ್ದ ಮನೆಯ ಬಳಿಯಿದ್ದ ಹಾಗೂ ಮಂತ್ರಿಗಳ ಮನೆಗಳ ಅಂಗಳದಲ್ಲಿದ್ದ ಗಂಧದ ಮರಗಳನ್ನೇ ಕದಿಯಲು ಬಂದಿದ್ದಂತಹ ಘಟನೆಗಳನ್ನು ನಾನು ನೋಡಿದ್ದೇನೆ” ಎಂದರು.

“ನಗರದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಟ್ರೀ ಪಾರ್ಕ್ ಗಳನ್ನು ನಿರ್ಮಾಣ‌ ಮಾಡಿ ನಗರದ ಶ್ವಾಸಕೋಶವನ್ನು ಹಿಗ್ಗಿಸುವ ಕೆಲಸ ಮಾಡಲಾಗುವುದು. ಶಾಲಾ ಮಕ್ಕಳಿಂದ ಗಿಡ ನೆಡುವ ಕೆಲಸ ಮಾಡಿಸಲಾಗಿತ್ತು.‌ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ಪಾಲಿಕೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದ್ದೇನೆ” ಎಂದು ಹೇಳಿದರು.

“ರಾಮಲಿಂಗಾರೆಡ್ಡಿ ಅವರಿಗೆ ನೀರಾವರಿ ಇಲಾಖೆ ನೀಡಲಾಗಿತ್ತು. ದೊಡ್ಡ ಇಲಾಖೆ ಸ್ವಚ್ಚವಾಗಿ ಕೆಲಸ ಮಾಡಬಹುದು ಎಂದು ಹೇಳಿದೆ. ಅನೇಕ ಅರ್ಚಕರು ರಾಮಲಿಂಗಾರೆಡ್ಡಿ ಅವರ ಬಳಿಯೇ ಮುಜರಾಯಿ ಇಲಾಖೆ  ಇರಬೇಕು ಎಂದು ಮನವಿ ಮಾಡಿದರು. ಅಷ್ಟು ದಕ್ಷವಾಗಿ ಇಲಾಖೆ ನಿರ್ವಹಿಸಿದ್ದರು” ಎಂದರು.

“ನಾನು ಹಾಗೂ ರಾಮಲಿಂಗಾರೆಡ್ಡಿ ಅವರು 9 ಚುನಾವಣೆ ಎದುರಿಸಿದ್ದೇವೆ. ಒಂದೊಂದು ಬಾರಿ ಸೋತಿದ್ದೇವೆ. ಸತತ 8 ಬಾರಿ ಗೆದ್ದವರು ನಾವಿಬ್ಬರೇ. ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರೂ ನಡುವೆ ಸೋತಿದ್ದಾರೆ” ಎಂದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

വന്ദേമാതരം വിവാദം: കേരളത്തില്‍ ആരെങ്കിലും ജയിലില്‍ പോയോ? ഉമര്‍ അബ്ദുല്ലക്കെതിരെ കോണ്‍ഗ്രസ്

ശ്രീനഗര്‍: വന്ദേമാതരം ആലാപനവുമായി ബന്ധപ്പെട്ട വിവാദത്തില്‍ ജമ്മു കാശ്മീര്‍ മുഖ്യമന്ത്രി ഉമര്‍...

மேற்கு வங்கம் அசைவ உணவு சர்ச்சை: கோயிலில் மீன் வறுவல் சாப்பிட்ட முதல்வர்; என்ன சொல்கிறது பாஜக?

நாட்டின் பிற பகுதிகளில், கோவிலில் அசைவ உணவு உண்பது அனுமதிக்கப்படாத ஒன்றாக...

Modi-Putin: మోడీతో పుతిన్ భేటీ.. ద్వైపాక్షిక సంబంధాలపై చర్చ

బ్రిక్స్ శిఖరాగ్ర సమావేశాల్లో భాగంగా ఢిల్లీలోని భారత్ మండపంలో ప్రధాని మోడీ-రష్యా...

ಹೊಸಕಡಜೆಟ್ಟಿ ಮಹದೇವಮ್ಮ ಸಾವು ಪ್ರಕರಣ: ಮೃತಳ ಮಗಳಿಗೆ ₹4.12 ಲಕ್ಷ ಪರಿಹಾರ

ಮೈಸೂರು,ಸೆಪ್ಟಂಬರ್,11,2026 (www.justkannada.in):  ನಂಜನಗೂಡು ತಾಲೂಕಿನ ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅವರ...