ಮೈಸೂರು,ಫೆಬ್ರವರಿ,6,2025 (www.justkannada.in): ಪತ್ನಿ ಪರಪುರಷನೊಂದಿಗೆ ಆನೈತಿಕ ಸಂಬಂಧವಿಟ್ಟುಕೊಂಡಿದ್ದಕ್ಕೆ ಮನನೊಂದು ವಿಷ ಸೇವಿಸಿ ಪತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ, ಆಕೆಯ ಸಹೋದರ ಮತ್ತು ಪ್ರಿಯಕರನಿಗೆ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಲಾ 5 ವರ್ಷಗಳ ಕಠಿಣ ಸಜೆ ಮತ್ತು ರೂ.1,25 ಲಕ್ಷ ರೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ನಂಜನಗೂಡು ತಾಲ್ಲೂಕು ಬಿಳಿಗೆರೆ ಗ್ರಾಮದ ಮಾದೇಗೌಡರ ಮಗನಾದ ಕುಮಾರ್ ಎಂಬುವವರು 23.01.2018ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಕುಮಾರ್ ಅವರ ಪತ್ನಿ ಜ್ಯೋತಿಯು (1ನೇಆರೋಪಿ), ಪ್ರಿಯಕರ ಚಿಕ್ಕಾಟಿ ಗ್ರಾಮದ ಪ್ರಸನ್ನಕುಮಾರ(3ನೇ ಆರೋಪಿ) ಆಕೆಯ ಸಹೋದರ ಮಂಜುನಾಥ(2ನೇ ಆರೋಪಿ) ಜೈಲು ಶಿಕ್ಷೆಗೊಳಗಾದವರು.
ಪತ್ನಿ ಜ್ಯೋತಿಯು ಪ್ರಸನ್ನಕುಮಾರ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದನ್ನ ಕಣ್ಣಾರೇ ಕಂಡಿದ್ದ ಪತಿ ಕುಮಾರ್ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲಿಸ್ ಉಪನಿರೀಕ್ಷಕರಾದ ಯಶವಂತಕುಮಾರ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ಕಾಯ್ದೆ)ದ ನ್ಯಾಯಾಧೀಶೆ ಕೆ. ಭಾಗ್ಯ ಅವರು ಆರೋಪಿಗಳು ಭಾರತೀಯ ದಂಡ ಸಂಹಿತೆಯ ಕಲಂ 306, 109 ಸ/ವಾ 34 ರಡಿಯಲ್ಲಿ ಅಪರಾಧವೆಸಗಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಅವರಿಗೆ ಶಿಕ್ಷೆಯನ್ನು ವಿಧಿಸಿದ್ದಾರೆ. ನ್ಯಾಯಾಧೀಶರು ಆರೋಪಿಗಳಿಗೆ ತಲಾ 5 ವರ್ಷಗಳ ಕಠಿಣ ಸಜೆಯನ್ನು ವಿಧಿಸಿದ್ದು ಹಾಗೂ ರೂ.1,25,000/- ದಂಡವನ್ನು ವಿಧಿಸಿದ್ದು ದಂಡವನ್ನು ತೆರಲು ತಪ್ಪಿದಲ್ಲಿ 1 ವರ್ಷದ ಸಜೆಯನ್ನು ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ.ಟಿ.ಹೆಚ್.ರವರು ವಾದಿಸಿದರು.
Key words: husband, commits suicide, wife, sentenced to jail, mysore court
The post ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಕೇಸ್: ಆರೋಪಿ ಪತ್ನಿ ಸೇರಿ ಮೂವರಿಗೆ ಜೈಲುಶಿಕ್ಷೆ, ದಂಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.