20
August, 2026

A News 365Times Venture

20
Thursday
August, 2026

A News 365Times Venture

ನಿಶಾನೆ ಆನೆಯಾಗಿ ಅಭಿಮನ್ಯು ಬಳಸಿಕೊಂಡು ಗೌರವಯುತ ಬೀಳ್ಕೊಡುಗೆ ನೀಡಿ- ಕೆ.ವಿ. ಮಲ್ಲೇಶ್ ಆಗ್ರಹ

Date:

ಮೈಸೂರು,ಆಗಸ್ಟ್,20,2026 (www.justkannada.in):  ವಯಸ್ಸಿನ ನೆಪವೊಡ್ಡಿ ಏಕಾಏಕಿ ಅಭಿಮನ್ಯು ಆನೆಯನ್ನು ದಸರಾ ಮಹೋತ್ಸವದಿಂದ ಕೈಬಿಟ್ಟಿರುವುದು ಸರಿಯಲ್ಲ. ಅಂಬಾರಿ ಆನೆಯಾಗಿ ಬಳಸಲು ಸಾಧ್ಯವಿಲ್ಲದಿದ್ದರೆ, ಕನಿಷ್ಠ ನಿಶಾನೆ ಆನೆಯಾಗಿಯಾದರೂ ಅಭಿಮನ್ಯುವನ್ನು ದಸರಾ ಗಜಪಡೆಯೊಂದಿಗೆ ಕರೆತಂದು ಗೌರವಯುತ ಬೀಳ್ಕೊಡುಗೆ ನೀಡಬೇಕು ಎಂದು ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಆಗ್ರಹಿಸಿದ್ದಾರೆ.

ಅಭಿಮನ್ಯು ಕೇವಲ ಅಂಬಾರಿ ಹೊರುತ್ತಿದ್ದ ಆನೆಯಲ್ಲ. ಮೈಸೂರಿಗರ ಪಾಲಿಗೆ ಆತ ಭಾವನಾತ್ಮಕ ನಂಟು ಹೊಂದಿರುವ ಗಜ. ಹೆಸರಿಗೆ ತಕ್ಕಂತೆ ಧೈರ್ಯ, ಶಾಂತತೆ, ನಿಷ್ಠೆ ಹಾಗೂ ನಾಯಕತ್ವ ಗುಣಗಳನ್ನು ಹೊಂದಿರುವ ಅಭಿಮನ್ಯು ಅರಣ್ಯ ಇಲಾಖೆಯ ಹೆಮ್ಮೆಯೂ ಹೌದು. ಹಲವು ವರ್ಷಗಳಿಂದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ನಾಡಿನ ಜನರ ಮನೆಮಾತಾಗಿದ್ದಾನೆ. ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಬೆನ್ನಮೇಲೆ ಹೊತ್ತು ರಾಜವೈಭವದಿಂದ ಹೆಜ್ಜೆ ಹಾಕುತ್ತಿದ್ದ ದೃಶ್ಯ ಮೈಸೂರಿಗರ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಅಭಿಮನ್ಯುವನ್ನು ಏಕಾಏಕಿ ದಸರೆಯಿಂದ ಕೈಬಿಟ್ಟಿರುವುದು ಬೇಸರದ ಸಂಗತಿ. ಕನಿಷ್ಠ ಈ ಬಾರಿಯಾದರೂ ದಸರಾ ಗಜಪಡೆಯೊಂದಿಗೆ ಕರೆತಂದು ಗೌರವಯುತ ಬೀಳ್ಕೊಡುಗೆ ನೀಡಬೇಕಿತ್ತು. ಆದರೆ ಅದಕ್ಕೂ ಅವಕಾಶ ನೀಡದ ಅರಣ್ಯ ಇಲಾಖೆಯ ನಿರ್ಧಾರ ಮೈಸೂರಿನ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಮಲ್ಲೇಶ್ ಹೇಳಿದ್ದಾರೆ.

ಈ ಹಿಂದೆ 60 ವರ್ಷ ಪೂರೈಸಿದ ಬಲರಾಮ ಹಾಗೂ ಅರ್ಜುನ ಆನೆಗಳನ್ನು ನಿಶಾನೆ ಆನೆಗಳಾಗಿ ದಸರಾ ಮಹೋತ್ಸವದಲ್ಲಿ ಬಳಸಿಕೊಂಡ ಉದಾಹರಣೆಗಳಿವೆ. ಇವು ತೀರ ಹಳೆಯ ಘಟನೆಗಳೇನಲ್ಲ. ಅರ್ಜುನ ಆನೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂಬಾರಿ ಹೊರುವುದರಿಂದ ನಿವೃತ್ತಿ ಪಡೆದಿದ್ದರೂ, ಆನೆಯನ್ನು ಸೆರೆ ಕಾರ್ಯಾಚರಣೆ ಸೇರಿದಂತೆ ಇತರೆ ಕಾರ್ಯಗಳಿಗೆ ಇಲಾಖೆ ಬಳಸಿಕೊಂಡಿತ್ತು. ಆನೆ ಸೆರೆ ಕಾರ್ಯಾಚರಣೆಯಲ್ಲಿದ್ದಾಗಲೇ ಅರ್ಜುನ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ದಸರೆಗೆ ಬೇಡವೆಂದರೆ ಕಾರ್ಯಾಚರಣೆಗಳಿಗೂ ಬೇಡ

ಅಭಿಮನ್ಯುವಿಗೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಸರೆಯಿಂದ ನಿವೃತ್ತಿ ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದರೆ, ಅದೇ ನಿಯಮವನ್ನು ಇತರೆ ಕಾರ್ಯಾಚರಣೆಗಳಿಗೂ ಅನ್ವಯಿಸಬೇಕು. ದಸರಾ ಮಹೋತ್ಸವಕ್ಕೆ ಮಾತ್ರ ವಯಸ್ಸಿನ ನಿಯಮ, ಆದರೆ ಇತರೆ ಅಪಾಯಕಾರಿ ಕಾರ್ಯಾಚರಣೆಗಳಿಗೆ ಅದೇ ಆನೆಯನ್ನು ಬಳಸುವುದು ಯಾವ ನ್ಯಾಯ? ದಸರೆಗೆ ಬೇಡವೆಂದರೆ ಮುಂದೆ ಯಾವುದೇ ಆನೆ ಸೆರೆ ಅಥವಾ ಇತರೆ ಅಪಾಯಕಾರಿ ಕಾರ್ಯಾಚರಣೆಗಳಿಗೂ ಅಭಿಮನ್ಯುವನ್ನು ಬಳಸಬಾರದು ಎಂದು ಕೆ.ವಿ. ಮಲ್ಲೇಶ್ ಒತ್ತಾಯಿಸಿದ್ದಾರೆ.

ಗಜಪಡೆಯಲ್ಲಿ ಹಿರಿಯ, ಅನುಭವಿ ಆನೆಯ ಅಗತ್ಯವಿದೆ

ಈ ಬಾರಿಯ ದಸರಾ ಗಜಪಡೆಯಲ್ಲಿ ಅನುಭವಿ ಹಾಗೂ ಹಿರಿಯ ಆನೆಯ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ಘೋಷಿಸಿರುವ ಆನೆಗಳಲ್ಲಿ ಅಂಬಾರಿ ಹೊತ್ತ ಅನುಭವ ಹೊಂದಿರುವ ಆನೆ ಇಲ್ಲದಿರುವುದು ಗಮನಾರ್ಹ. ಹಿಂದಿನ ದಸರಾಗಳಲ್ಲಿ ನಿವೃತ್ತ ಆನೆಗಳನ್ನು ನಿಶಾನೆ ಆನೆಗಳಾಗಿ ಬಳಸಿಕೊಳ್ಳುವ ಮೂಲಕ ಗಜಪಡೆಯಲ್ಲಿನ ಅನುಭವಿ ಹಾಗೂ ಹಿರಿಯ ಆನೆಗಳ ಕೊರತೆಯನ್ನು ನೀಗಿಸಲಾಗುತ್ತಿತ್ತು.

ಅಭಿಮನ್ಯುವಿನಂತಹ ಹಿರಿಯ ಹಾಗೂ ಅನುಭವಿ ಆನೆ ಗಜಪಡೆಯಲ್ಲಿದ್ದರೆ, ಇತರೆ ಆನೆಗಳನ್ನು ನಿಯಂತ್ರಿಸಲು ಹಾಗೂ ಹೊಸ ಆನೆಗಳಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ. ದಸರಾ ಮೆರವಣಿಗೆಯನ್ನು ಹೆಚ್ಚು ಸುರಕ್ಷಿತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಅಭಿಮನ್ಯುವಿನ ಅನುಭವವೂ ನೆರವಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜನರ ಭಾವನೆಗಳನ್ನು ಗೌರವಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕನಿಷ್ಠ 2ನೇ ಹಂತದ ದಸರಾ ಆನೆಗಳ ಆಯ್ಕೆಯಲ್ಲಾದರೂ ಅಭಿಮನ್ಯುವನ್ನು ಪರಿಗಣಿಸಿ ನಿಶಾನೆ ಆನೆಯಾಗಿ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಆ ಮೂಲಕ ಅಭಿಮನ್ಯುವಿಗೆ ಮೈಸೂರಿನ ಜನತೆಯ ಪರವಾಗಿ ಗೌರವಯುತ ಬೀಳ್ಕೊಡುಗೆ ನೀಡಬೇಕು ಎಂಬುದು ನಾಡಿನ ಜನರ ಅಭಿಲಾಷೆ ಹಾಗೂ ಹಕ್ಕೊತ್ತಾಯವಾಗಿದೆ ಎಂದು ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.

Key words:  respectful farewell, Abhimanyu, elephant, K.V. Mallesh

The post ನಿಶಾನೆ ಆನೆಯಾಗಿ ಅಭಿಮನ್ಯು ಬಳಸಿಕೊಂಡು ಗೌರವಯುತ ಬೀಳ್ಕೊಡುಗೆ ನೀಡಿ- ಕೆ.ವಿ. ಮಲ್ಲೇಶ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മോഹൻ ഭാഗവതിന്റെ യു.എസ് സന്ദർശനത്തിന് മുന്നോടിയായി ആർ.എസ്.എസ്സിനെതിരെ ഉപരോധ ആവശ്യം; USCIRF ഇടപെടൽ

ന്യൂദൽഹി: ആർ.എസ്.എസ് മേധാവി മോഹൻ ഭാഗവത് മൂന്ന് രാജ്യങ്ങളിലേക്കുള്ള സന്ദർശനം ആരംഭിക്കാനിരിക്കെ,...

"அம்மா, உங்களையும் அப்பாவையும் ஒன்றாக பார்த்து 35 ஆண்டுகளுக்கும் மேலாகிவிட்டது.!"- ராகுல் உருக்கம்

இந்திய தேசிய காங்கிரஸின் மூத்த தலைவர் சோனியா காந்தியின் வாழ்க்கைப் பயணத்தை...

ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ

ಮಹಾಬಲಿಪುರಂ, ಆಗಸ್ಟ್, 20,2026 (www.justkannada.in): “ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ...