19
August, 2026

A News 365Times Venture

19
Wednesday
August, 2026

A News 365Times Venture

ಉಪಸಭಾಧ್ಯಕ್ಷರಾಗಿ ಆಯ್ಕೆ: ಮಂಕಾಳ್ ವೈದ್ಯ ಅವರು ಸಜ್ಜನ ವ್ಯಕ್ತಿ: ಸಿಎಂ ಡಿ‌‌.ಕೆ ಶಿವಕುಮಾರ್ ಬಣ್ಣನೆ

Date:

ಬೆಂಗಳೂರು, ಆಗಸ್ಟ್,18,2026 (www.justkannada.in): “ಮೀನುಗಾರ ಕುಟುಂಬದಿಂದ ಬಂದು. ಈಗಲೂ ತಮ್ಮ ವೃತ್ತಿಯಲ್ಲಿ ತೊಡಗಿರುವ ಸಜ್ಜನ ವ್ಯಕ್ತಿಯಾದ ಮಂಕಾಳ್ ವೈದ್ಯ ಅವರನ್ನು ಉಪ ಸಭಾದ್ಯಕ್ಷರನ್ನಾಗಿ  ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ನೋಡಿ ಸಂತಸವಾಗಿದೆ” ಎಂದು ಸಿಎಂ‌ ಡಿ. ಕೆ ಶಿವಕುಮಾರ್ ಅವರು ಹೇಳಿದರು.

ವಿಧಾನಸಭೆ ಉಪಸಭಾಧ್ಯಕ್ಷರಾಗಿ ಮಂಕಾಳ್ ವೈದ್ಯ ಅವರು ಆಯ್ಕೆಯಾದರು. ನಂತರ ವಿಧಾನಸಭೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.

“ವಿರೋಧ ಪಕ್ಷದವರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಸಂಪ್ರದಾಯವಿದೆ. ಆದರೆ ಲೋಕಸಭೆಯಲ್ಲಿ ಇನ್ನೂ ಆ ಸ್ಥಾನ ಖಾಲಿ ಬಿಡಲಾಗಿದೆ. ನಾವೂ ಇದರ ಬಗ್ಗೆಯೂ ಆಲೋಚನೆ ಮಾಡಿದೆವು.‌ ಆದರೆ ಹೆಚ್ಚು ಒತ್ತಡವಿದ್ದ ಕಾರಣಕ್ಕೆ ಮಂಕಾಳ್‌ ವೈದ್ಯ ಅವರಿಗೆ ಜವಾಬ್ದಾರಿ ನೀಡಲಾಯಿತು. ಅವರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿತ್ತು. ನಾನೇ ಅವರ ಬಳಿ ಮನವಿ ಮಾಡಿ ಈ ಉಪಸಭಾಧ್ಯಕ್ಷರ ಸ್ಥಾನ ಪಡೆಯುವಂತೆ ಕೇಳಿಕೊಂಡೆ” ಎಂದರು.

“ಉಪ ಸಭಾದ್ಯಕ್ಷರ ಆಯ್ಕೆ ಸಂಬಂಧ ವಿರೋಧ ಪಕ್ಷದವರಿಗೂ ಅಭಿನಂದನೆ ತಿಳಿಸುತ್ತೇನೆ. ನಮ್ಮ ಪಕ್ಷದ ಲೆಡರ್ ಹೆಡ್ ನಲ್ಲಿ ಸಭಾಪತಿ, ಉಪಸಭಾಪತಿಗಳ ಹೆಸರನ್ನು ಸೂಚಿಸಲಾಗಿತ್ತು ಎಂದು ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ” ಎಂದು ತಿಳಿಸಿದರು.

“ಇದು ಅಪರೂಪದ ಸಂದರ್ಭ. ನನಗೆ ಅತ್ಮೀಯ ಮಿತ್ರರು. ಅವರ ನಡತೆ, ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಪಯಣ ಬಹಳ ವಿಶೇಷವಾಗಿದೆ. ಪಕ್ಷೇತರ ಶಾಸಕರಾಗಿ ಆಯ್ಕೆಯಾದವರು. ನಂತರ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಯಿತು. ಬಂದರು, ಮೀನುಗಾರಿಕೆ ಸಚಿವರಾಗಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಿದವರು” ಎಂದರು.

“ಮೀನುಗಾರರ ಕುಟುಂಬ. ಈಗಲೂ ತಮ್ಮ ವೃತ್ತಿ ಮಾಡುತ್ತಿದ್ದಾರೆ. ಅದರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. 2005 ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. ಅಂದರೆ ತಳಮಟ್ಟದ ರಾಜಕೀಯದಿಂದ ಮೇಲೆ ಬಂದವರು. 2013 ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. 2018 ರಲ್ಲಿ ಕಾರಣಾಂತರಗಳಿಂದ ಸೋಲಬೇಕಾಯಿತು. 2023 ರಲ್ಲಿ ಮತ್ತೆ ಗೆದ್ದು ಅತ್ಯುತ್ತಮವಾಗಿ ಕೆಲಸ ಮಾಡಿದರು.

“ನೀವು ಉಪ ಸಭಾಧ್ಯಕ್ಷ ಸ್ಥಾನ ದೊರೆಯಿತು ಎಂದು ಬೇಸರಿಸಿಕೊಳ್ಳಬೇಡಿ. ರುದ್ರಪ್ಪ ಲಮಾಣಿ ಅವರು ಇದೇ ಸ್ಥಾನದಲ್ಲಿ ಕುಳಿತು ಈಗ ಸಚಿವರಾಗಿದ್ದಾರೆ. ಆ ಸ್ಥಾನದಲ್ಲಿ ಕುಳಿತ ಎಸ್ ಎಂ ಕೃಷ್ಣ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದರು. ಅದಕ್ಕೆ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ” ಎಂದರು.

ಮಂಕಾಳ್‌ ವೈದ್ಯ ಮನವೊಲಿಸಲು ಕಷ್ಟವಾಯಿತು

ಸಿಎಂ‌ ಮಾತಿನ ಮಧ್ಯೆ “ಉಪಸಭಾಧ್ಯಕ್ಷರ ಆಯ್ಕೆ ಟೈಪಿಂಗ್ ತಪ್ಪಿನಿಂದ ಉಂಟಾಗಿದೆ” ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದಾಗ, “ಆಯಿತು, ನಿಮ್ಮ‌ ಮಾತನ್ನೂ ಒಪ್ಪೋಣ. ಆದರೆ ನಾವೆಲ್ಲರೂ ಸೇರಿ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದೇವೆ. ರಾಜಕೀಯದಲ್ಲಿ ಹಗ್ಗ ಜಗ್ಗಾಟ ನಿಮ್ಮಲ್ಲಿ, ನಮ್ಮಲ್ಲಿ ಎಲ್ಲಾ ಕಡೆಯೂ ನಡೆಯುತ್ತದೆ. ಆದರೆ ನಮ್ಮಲ್ಲಿ ಯಾವುದೇ ಜಗ್ಗಾಟ ಉಂಟಾಗಲಿಲ್ಲ. ಈ ಸ್ಥಾನಕ್ಕೆ ಮಂಕಾಳ್ ವೈದ್ಯ ಅವರನ್ನು ಮನವೊಲಿಸಲು ನಮಗೆ ಕಷ್ಟವಾಯಿತು” ಎಂದರು.

ಬಿಜೆಪಿಯ ಅರವಿಂದ ಬೆಲ್ಲದ ಅವರು, “ವೈದ್ಯ ಅವರ ಮನವೊಲಿಸಲು ನಿಮಗೆ ಸಮಯ ವ್ಯರ್ಥವಾಗಿದೆ. ಅವರಿಗೆ ತಯಾರಿರಲಿಲ್ಲ” ಎಂದಾಗ, ಪ್ರತಿಕ್ರಿಯಿಸಿದ ಸಿಎಂ “ನಿನಗೂ ಪರಿಸ್ಥಿತಿ ಆ ಬರುತ್ತದೆ. ನಿನ್ನ ಮನವೊಲಿಸಲಿಲ್ಲವೇ? ಯಾವುದೇ ಫೈಲ್ ಗೆ ಸಹಿ ಹಾಕಬೇಡಿ ಹುಷಾರಪ್ಪ ಎಂದು ನೀವು ಹೇಳಿರಲಿಲ್ಲವೇ? ನನಗೂ ಎಲ್ಲವೂ ಗೊತ್ತಿದೆ. ನಾಳೆ ನೀವು ಪಕ್ಕದ ಚೇರಿನಿಂದ ಈ ಕಡೆ ಇರುವ ಚೇರಿಗೂ ಬರಬಹುದು. ಹಿಂದೆ, ಮುಂದೆಯೂ ಆಗಬಹುದು. ‌ರಾಜಕೀಯ ಎಂಬುದು ಸಾಧ್ಯತೆಗಳ ಕಲೆ.‌ ಯಾರು ಏನು ಬೇಕಾದರೂ ಆಗಬಹುದು, ಬರಬಹುದು” ಎಂದರು.

ವಿರೋಧ ಪಕ್ಷದ ಧಿಕ್ಕಾರ; ಆಳವಾದ ಗಾಯ ಮಾಡಿದೆ

“ನನಗೆ ಅಶ್ವಥ್ ನಾರಾಯಣ್, ವಿಜಯೇಂದ್ರ ಅವರ ತಂಡದ ಮೇಲೆ ಬಹಳ ಬೇಜಾರಾಗಿದೆ. ಎರಡು ಮೂರು ದಿನ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ ಎಂದು ಹೇಳಿದ್ದೇನೆ. ಆದರೂ ಸದನಕ್ಕೆ ಬರುತ್ತಿದ್ದಂತೆ ಧಿಕ್ಕಾರ ಎಂದು ಕೂಗಿ ನನ್ನ ಮನಸ್ಸಿಗೆ ಆಳವಾದ ಗಾಯ ಮಾಡಿದ್ದೀರಿ. ಈ ವಿಚಾರ ನನಗೆ ನಾಟಿದೆ” ಎಂದು ಬೇಸರಿಸಿದರು.

“ನಾನು ಇರೋದನ್ನು ಹೇಳುತಿರುವೆ. ನನಗೆ ಆದ ನೋವು ನನಗೆ ಮಾತ್ರ ಗೊತ್ತು. ನಾವು ಯಾರೂ ಶಾಶ್ವತವಲ್ಲ. ಬೇರೆ ಪಕ್ಷದಿಂದ ಬಂದವರನ್ನು ಮಂತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರೂ ಮಾಡಿಕೊಂಡಿದ್ದರು. ಕೇಂದ್ರ‌ ಸರ್ಕಾರದಲ್ಲಿ ಎಷ್ಟು ‌ಜನರನ್ನು ಮಂತ್ರಿ ಮಾಡಿಲ್ಲ? ಯಡಿಯೂರಪ್ಪ ‌ಅವರು ಬೇರೆ ಪಕ್ಷವನ್ನೇ ಕಟ್ಟಿದರು. ನಂತರ ಬಿಜೆಪಿಗೆ ಬಂದು ಮತ್ತೆ ಸಿಎಂ ಆದರು.‌ ಅವರು ಆಗ ಏನೇನು ಹೇಳಿದ್ದರು ಎಂದು ಎಲ್ಲಾ ದಾಖಲೆಯಾಗಿ ಉಳಿದಿದೆ. ಯಡಿಯೂರಪ್ಪ ಅವರನ್ನು ಮತ್ತೆ ಅನಿವಾರ್ಯವಾಗಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲಾಯಿತು” ಎಂದರು.

ಯೌವನ, ಹಣ, ಅಧಿಕಾರ ಒಂದೇ‌ ಕಡೆ ಸೇರಬಾರದು

“ಯೌವನ, ಹಣ, ಅಧಿಕಾರ ಈ ಮೂರು ಸಂಗತಿಗಳು ಒಂದೇ ಕಡೆ ಸೇರಬಾರದು ಎಂದು ಹಿರಿಯರು ಅಂದೇ‌ ನನಗೆ ಕಿವಿಮಾತು ಹೇಳಿದ್ದರು” ಎಂದು ವಿಚಾರವನ್ನು ಮೆಲುಕು ಹಾಕಿದರು.

“ನಾನು ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದರೂ ರಾಜಕೀಯ ಮಾಡಲೆಂದೇ ಇಲ್ಲಿಗೆ ಬಂದವನು. ಪಿಯು ಓದುವಾಗಲೇ ಚುನಾವಣೆಗೆ ನಿಂತಿದ್ದೆ. ನಂತರ ಡಿಗ್ರಿ ಓದುವಾಗ ಎಂಎಲ್ ಎ ಸ್ಥಾನಕ್ಕೆ ಅವಕಾಶ ಸಿಕ್ಕಿತು. ಬಂಗಾರಪ್ಪ ಅವರು ಚಿಕ್ಕ ವಯಸ್ಸಿನಲ್ಲಿಯೇ ನನ್ನ ಮಂತ್ರಿ ಮಾಡಿದರು. ಆಗ ಅನೇಕರು ಹೇಳುತ್ತಿದ್ದರು. ಈ ಸ್ಥಾನ ಶಾಶ್ವತವಲ್ಲ ಎಂದು. ನನಗೆ ಮದುವೆ ಸಹ ಆಗಿರಲಿಲ್ಲ. ನಾನು ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ದಿನವೇ ಅನಿಸಿತು. ಅಧಿಕಾರ ಶಾಶ್ವತವಲ್ಲ. ದೇವರು ಆಗಲೇ ಆರ್ಥಿಕ ಶಕ್ತಿ ನೀಡಿದ್ದ” ಎಂದರು.

“ನಮ್ಮ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ. ಕರ್ನಾಟಕವನ್ನು ಬಲಿಷ್ಠ ಮಾಡಿ ಭಾರತ ಬೆಳೆಯುವಂತೆ ಮಾಡೋಣ. ವೈದ್ಯ ಅವರು ಶುದ್ಧ ಮನಸ್ಸಿನ ಮಿತ್ರ. ಸಮುದ್ರದಲ್ಲಿ ಈಜುವ ಶಕ್ತಿ ಇದೆ ಅವರಿಗೆ. ಪ್ರಕೃತಿ ನಾಡಿನಲ್ಲಿ ಬೆಳೆದ ಸ್ನೇಹಿತ.. ಅಲ್ಲಿನ ಪ್ರಕೃತಿ ಸಂಪತ್ತು ಬಳಸಿಕೊಳ್ಳಲು ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ” ಎಂದರು.

Key words: Deputy Speaker, Mankal Vaidya, gentleman, CM D.K. Shivakumar

The post ಉಪಸಭಾಧ್ಯಕ್ಷರಾಗಿ ಆಯ್ಕೆ: ಮಂಕಾಳ್ ವೈದ್ಯ ಅವರು ಸಜ್ಜನ ವ್ಯಕ್ತಿ: ಸಿಎಂ ಡಿ‌‌.ಕೆ ಶಿವಕುಮಾರ್ ಬಣ್ಣನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സെൻസസിനൊപ്പം എൻ.പി.ആർ നടപ്പാക്കാൻ കേന്ദ്രനീക്കം; പൗരത്വത്തെ മതവുമായി ബന്ധിപ്പിക്കാനുള്ള ശ്രമം അംഗീകരിക്കാനാകില്ലെന്ന് പിണറായി വിജയൻ

തിരുവനന്തപുരം: വരാനിരിക്കുന്ന സെൻസസ് ചോദ്യാവലിയിൽ മാതാപിതാക്കളുടെ ജനനസ്ഥലം, മതം തുടങ്ങിയ വിവരങ്ങൾ...

மாணவர்கள் போராட்டம் குறித்த சுற்றறிக்கை: "பாசிச அரசியலைத் தொடங்க ஆழம் பார்த்ததா தவெக அரசு?"- கனிமொழி

காக்ரோச் ஜனதா கட்சி மற்றும் இடதுசாரி போராட்டங்களில் மாணவர்கள் பங்கேற்பதைத் தடுக்க...

Pakistan: ఇమ్రాన్ ఖాన్‌కు ఊరట.. 9 నెలల తర్వాత భార్య, సోదరిని కలిసిన మాజీ ప్రధాని..

Pakistan: పాకిస్తాన్ మాజీ ప్రధానమంత్రి మరియు పాకిస్తాన్ తెహ్రీక్-ఎ-ఇన్సాఫ్ (పిటిఐ) వ్యవస్థాపకుడు...

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮತ್ತೆ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸರ್ಕಾರ ತೀರ್ಮಾನ

ಬೆಂಗಳೂರು,ಆಗಸ್ಟ್,19,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ...