ಬೆಂಗಳೂರು, ಆಗಸ್ಟ್, 12,2026 (www.justkannada.in): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ನಿಯಂತ್ರಕರ ಹುದ್ದೆಗೆ ಐಎಎಸ್ ಅಧಿಕಾರಿಗಳ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಪ್ರಸನ್ನ ಎಚ್., ಐಎಎಸ್ (2017 ಬ್ಯಾಚ್) ಅವರನ್ನು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಹುದ್ದೆಗೆ ಹೆಚ್ಚುವರಿ ಹೊಣೆಗಾರಿಕೆಯಲ್ಲಿ ನೇಮಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರು ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ಹಿಂದೆ ಪರೀಕ್ಷಾ ನಿಯಂತ್ರಕರಾಗಿದ್ದ ದಿಗ್ವಿಜಯ್ ಬೋಡ್ಕೆ, ಐಎಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಲವಿಷ್ ಒರ್ಡಿಯಾ, ಐಎಎಸ್ (2020 ಬ್ಯಾಚ್) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಪಿಎಸ್‌ಸಿಯ ಜಂಟಿ ಪರೀಕ್ಷಾ ನಿಯಂತ್ರಕರಾಗಿ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ. ಈ ಹುದ್ದೆ ಖಾಲಿ ಇತ್ತು.
ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಹಾಗೂ ಜಂಟಿ ಪರೀಕ್ಷಾ ನಿಯಂತ್ರಕರ ಹುದ್ದೆಗಳನ್ನು ಐಎಎಸ್ ವೇತನ ನಿಯಮಗಳು, 2016ರ ನಿಯಮ 12ರ ಅನ್ವಯ ಹಿರಿಯ ಶ್ರೇಣಿಯ ಐಎಎಸ್‌ನ ನಿರ್ದೇಶಕ, ಪೌರಾಡಳಿತ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಯ ಹುದ್ದೆಗಳೆಂದು ಸರ್ಕಾರ ಘೋಷಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವೆಗಳು-11) ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ರಾಜ್ಯಪಾಲರ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ.
Key words: KPSC, New, Examination Controllers, Prasanna H. IAS
The post KPSC ಪರೀಕ್ಷಾ ನಿಯಂತ್ರಕರಾಗಿ ಪ್ರಸನ್ನ ಎಚ್. ಐಎಎಸ್ ಅವರಿಗೆ ಹೆಚ್ಚುವರಿ ಹೊಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





