ಮೈಸೂರು,ಫೆಬ್ರವರಿ,1,2025 (www.justkannada.in): ಇಡೀ ವಿಶ್ವ ಕೃತಕ ಬುದ್ಧಿಮತ್ತೆಯ ಸ್ಪರ್ಧಾತ್ಮಕ ಜಗತ್ತಿನ ಶರವೇಗದ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಈ ಸಮಯದಲ್ಲಿ ಧಾರ್ಮಿಕ ಉನ್ಮಾದದ ಸ್ನಾನ ಇತ್ಯಾದಿಗಳಿಗೆ ಒತ್ತು ನೀಡಿ, ಗೋಮೂತ್ರದ ಶ್ರೇಷ್ಠತೆ ಸಾರುತ್ತಾ ಅಂಧಯುಗದತ್ತ ದೇಶವನ್ನು ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರ ಮತ್ತೊಮ್ಮೆ ತನ್ನ ಪ್ರತಿಗಾಮಿ ಬಜೆಟ್ ಮೂಲಕ ಇಡೀ ದೇಶಕ್ಕೆ ಮಂಕುಬೂದಿ ಎರಚಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಕಾರ್ಪೊರೇಟ್ ಪ್ರೇಮ ತೋರುವ ಮತ್ತು ಬಡವರ ತುಳಿತ ಕಾಯಂಗೊಳಿಸುವ ಈ ಬಜೆಟ್‌ನಲ್ಲಿ ಅಭಿವೃದ್ಧಿಯ ಯಾವುದೇ ಆಶಾಕಿರಣ ಕಾಣುತ್ತಿಲ್ಲ. ಈ ದೇಶನ ಬಹುಸಂಖ್ಯಾತರಾದ ಮಹಿಳೆಯರು, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತರು, ಹಿಂದುಳಿದ ಅಲ್ಪಸಂಖ್ಯಾತರು, ವಿದ್ಯಾರ್ಥಿ ಸಮೂಹ, ಎಸ್ಸಿಎಸ್ಟಿ ಸಮುದಾಯ, ಕಾರ್ಮಿಕರು, ರೈತರಿಗೆ ಈ ಸರ್ಕಾರ ಯಾವುದೇ ಖಚಿತ ನೆರವು ನೀಡಿಲ್ಲ. ಆದರೆ ಕಾರ್ಪೊರೇಟ್ ಕುಳಗಳಿಗೆ ಹಿಂಬಾಗಿಲಿನಿಂದ ಒದಗಿಸುವ ಸೌಲಭ್ಯಗಳನ್ನು ಈ ಬಾರಿಯೂ ಮುಂದುವರೆಸಲಾಗಿದೆ. ಇದು ಈ ದೇಶದ ಬಡ, ಮಧ್ಯಮ ವರ್ಗ, ರೈತರು ಮತ್ತು ಕಾರ್ಮಿಕರ ವರ್ಗದ ವಿರೋಧಿ ಮತ್ತು ಪ್ರಗತಿ ವಿರೋಧಿ ಬಜೆಟ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟೀಕಿಸಿದ್ದಾರೆ.
ಸ್ವಪ್ರಶಂಸಕರಿಂದ ಹೊಗಳಿಸಿಕೊಳ್ಳುವ ಕೇಂದ್ರ ಅರ್ಥಮಂತ್ರಿ ನಿರ್ಮಲಾ ಅವರು, ಆದಾಯ ತೆರಿಗೆ ಕಡಿತ ಅನುಕೂಲಕಾರಿ ಎಂದಿದ್ದಾರೆ. ಇದು ಐಟಿ ಬಿಟಿಯ ಸಂಪನ್ನ ನೌಕರರು ಮತ್ತು ಸಾಮಾನ್ಯವಾಗಿ ಸ್ಥಿತಿವಂತರಾಗಿರುವ ಸರ್ಕಾರಿ ನೌಕರರಿಗಷ್ಟೇ ಅನುಕೂಲಕಾರಿ. ಇವರನ್ನು ಬಿಟ್ಟು ದೊಡ್ಡ ಸಂಖ್ಯೆಯಲ್ಲಿರುವ ಇತರ ಮಧ್ಯಮ ವರ್ಗಕ್ಕೆ ಏನು ಅನುಕೂಲ ಎನ್ನುವುದನ್ನು ನಿರ್ಮಲಾ ಅವರು ಖಚಿತಪಡಿಸಿಲ್ಲ.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಳಜಿಯನ್ನೂ ಕೇಂದ್ರ ತೋರಿಲ್ಲ. ಹೀಗಾಗಿ ರೈತರು ಗಡಿಗಳಲ್ಲಿ ಪ್ರತಿಭಟನೆ ನಡೆಸುವುದು ಮುಂದುವರೆದಂತಾಗಿದೆ. ಯಾವುದೇ ದೇಶದ ರೈತ, ತನ್ನದೇ ಸರ್ಕಾರದ ವಿರುದ್ದ ಪ್ರತಿಭಟನೆ ಕುಳಿತನೆಂದರೆ ಇಂತಹ ಸರ್ಕಾರಕ್ಕೆ ಆಡಳಿತ ನಡೆಸುವ ಹಕ್ಕಿರುವುದಿಲ್ಲ. ಆದರೆ ಕೇಂದ್ರದಲ್ಲಿರುವ ಭಂಡ ಸರ್ಕಾರ, ಅಷ್ಟೇ ಭಂಡ ಪ್ರಧಾನಿ, ಹಣಕಾಸು ಮತ್ತು ಕೃಷಿಮಂತ್ರಿಗಳು ತಾವು ರೈತರ ವಿರೋಧಿಗಳೆಂಬುದನ್ನು ಮತ್ತೊಮ್ಮೆ ಈ ಬಜೆಟ್ ನಲ್ಲಿ ಸಾಬೀತು ಪಡಿಸಿದ್ದಾರೆ ಎಂದು ಹೆಚ್ ಎ ವೆಂಕಟೇಶ್ ಟೀಕಿಸಿದ್ದಾರೆ.
Key words: BJP government, budget, KPCC, Spokesperson, H.A. Venkatesh
The post ಪ್ರತಿಗಾಮಿ ಬಜೆಟ್ ಮೂಲಕ ಬಿಜೆಪಿ ಸರ್ಕಾರ ಇಡೀ ದೇಶಕ್ಕೆ ಮಂಕುಬೂದಿ ಎರಚಿದೆ-ಹೆಚ್.ಎ ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.