ಮೈಸೂರು,ಜನವರಿ,27,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಇಬ್ಬರು ಬಲಿಯಾದ ಹಿನ್ನೆಲೆ ರೈತ ಸಂಘ ಮತ್ತು ಪ್ರಗತಿಪರ ಸಂಘಟಕರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಶವಗಾರದ ಮುಂದೆ ಜಮಾಯಿಸಿ ಧರಣಿ ನಡೆಸಿದ ರೈತ ಸಂಘ ಮತ್ತು ಪ್ರಗತಿಪರ ಸಂಘಟಕರು ಸಿಎಂ ಕ್ಷೇತ್ರದಿಂದ ಮೈಕ್ರೋ ಫೈನಾನ್ಸ್ ಗಳನ್ನು ತೊಲಗಿಸುವಂತೆ ಅಗ್ರಹಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹಾಗೂ ದಸಂಸ ಮುಖಂಡರಾದ ಮಲ್ಲಹಳ್ಳಿ ನಾರಾಯಣ, ಕಾರ್ಯ ಬಸವಣ್ಣ, ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಜನರು ಬಲಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ತವರು ಕ್ಷೇತ್ರ ಎಂದು ಲೆಕ್ಕಿಸದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಒಂದೇ ರಾತ್ರಿ ಅಂಬಳೆ ಮತ್ತು ಮಲ್ಕುಂಡಿ ಗ್ರಾಮಗಳಲ್ಲಿ ಇಬ್ಬರೂ ಬಲಿಯಾಗಿದ್ದಾರೆ. ಈ ನಡುವೆ ನಂಜನಗೂಡಿನ ತಹಶೀಲ್ದಾರ್ ಶಿವಕುಮಾ ರ್ ಕಾಸ್ನೂರು ಮೈಕ್ರೋ ಫೈನಾನ್ಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೂ ಸಿಎಂ ಮತ್ತು ತಹಶೀಲ್ದಾರ್ ಮಾತಿಗೂ ಕಿಮ್ಮತ್ತು ನೀಡದ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ ಎಂದು ದೂರಿದರು.
ಕೂಡಲೇ ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಜೀವ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ 25 ಲಕ್ಷ ರೂ. ಗಳ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
Key words: Massive, protest, microfinance, harassment, mysore
The post ಸಿಎಂ ತವರಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಆಗ್ರಹ: ಬೃಹತ್ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.