29
September, 2026

A News 365Times Venture

29
Tuesday
September, 2026

A News 365Times Venture

ಕೊಲೆ ಮತ್ತು ಸಂಚು ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Date:

 

ಬೆಂಗಳೂರು, ಸೆ.28, 2026: ಬೆಂಗಳೂರಿನಲ್ಲಿ ನಡೆದ ಸಂಚಲನ ಮೂಡಿಸಿದ್ದ ಕೊಲೆ ಹಾಗೂ ಅಪರಾಧ ಸಂಚು ಪ್ರಕರಣದಲ್ಲಿ ಆರೋಪಿಗಳಾದ A2 ಮತ್ತು A4 ತಪ್ಪಿತಸ್ಥರೆಂದು ತೀರ್ಪು ನೀಡಿರುವ 60ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಇಬ್ಬರಿಗೂ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು 195 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಅಪಹರಣ, ಕೊಲೆ, ಅಪರಾಧ ಸಂಚು ಹಾಗೂ ಸಾಕ್ಷ್ಯ ನಾಶಪಡಿಸುವ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಯಾವ ಅಪರಾಧಕ್ಕೆ ಎಷ್ಟು ಶಿಕ್ಷೆ?

– IPC 120(B) – ಅಪರಾಧ ಸಂಚು: ಜೀವಾವಧಿ ಶಿಕ್ಷೆ ಹಾಗೂ ತಲಾ ₹10,000 ದಂಡ.

– IPC 364 r/w 120(B), 34 – ಕೊಲೆ ಮಾಡುವ ಉದ್ದೇಶದಿಂದ ಅಪಹರಣ: ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ.

– IPC 302 r/w 34 – ಕೊಲೆ: ಜೀವಾವಧಿ ಶಿಕ್ಷೆ ಹಾಗೂ ತಲಾ ₹10,000 ದಂಡ.

– IPC 201 – ಸಾಕ್ಷ್ಯ ನಾಶಪಡಿಸುವುದು: 3 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹5,000 ದಂಡ.

ನ್ಯಾಯಾಲಯವು ಎಲ್ಲಾ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಬೇಕು (concurrently) ಎಂದು ಆದೇಶಿಸಿದೆ. ಹೀಗಾಗಿ ಆರೋಪಿಗಳು ಜೀವಾವಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗುತ್ತದೆ.

ಪೊಲೀಸ್ ತನಿಖೆಗೆ ಮೆಚ್ಚುಗೆ:

ಪ್ರಕರಣದ ತನಿಖೆಯನ್ನು ಅಂದಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಬಿ. ಸಂಜೀವ್ ಗೌಡ ನಡೆಸಿದ್ದರು. ತಾಂತ್ರಿಕ, ಸಾಂದರ್ಭಿಕ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಮಗ್ರವಾಗಿ ಸಂಗ್ರಹಿಸಿ ಪ್ರಕರಣವನ್ನು ಬಲಪಡಿಸುವಲ್ಲಿ ತನಿಖಾ ತಂಡದ ಪಾತ್ರ ಪ್ರಮುಖವಾಗಿತ್ತು.

ಪ್ರಾಸಿಕ್ಯೂಷನ್ ಪರವಾಗಿ ಸಾರ್ವಜನಿಕ ಅಭಿಯೋಜಕಿ ಶೈಲಜಾ ಕೃಷ್ಣ ನಾಯಕ್ ಅವರು ನ್ಯಾಯಾಲಯದಲ್ಲಿ ಸಮಗ್ರ ವಾದ ಮಂಡಿಸಿದ್ದರು.

195 ಪುಟಗಳ ತೀರ್ಪಿನ ಮೂಲಕ ಕೊಲೆ ಮತ್ತು ಅಪರಾಧ ಸಂಚು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಮಂಡಿಸಲಾಗಿದ್ದ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯವು A2 ಮತ್ತು A4 ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

CRIME STORY BACKGROUND:

ಜಮೀನು ವಿವಾದದ ಹಿನ್ನೆಲೆ: ಮಹಿಳೆಯನ್ನು ಸೈನೈಡ್ ನೀಡಿ ಕೊಂದು ಶವ ಕಾಲುವೆಗೆ ಎಸೆದ ಆರೋಪ

ಬೆಂಗಳೂರು: ಜಮೀನು ಖರೀದಿ–ಮಾರಾಟದ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಸಂಚು ರೂಪಿಸಿ ಸೈನೈಡ್ ನೀಡಿ, ಕಲ್ಲಿನಿಂದ ಹೊಡೆದು ಕೊಲೆಗೈದು, ಬಳಿಕ ಆಭರಣಗಳನ್ನು ಕಳಚಿಕೊಂಡು ಮೃತದೇಹವನ್ನು ಕಾಲುವೆಗೆ ಎಸೆದಿರುವ ಪ್ರಕರಣದ ತನಿಖೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ.

ತನಿಖೆಯ ಪ್ರಕಾರ, ಮೃತರಾದ ಕೆ.ಸೀತಾಳ ಸಹೋದರ ಕೆ.ವೆಂಕಟೇಶ್ ಅವರ ಹೆಸರಿನಲ್ಲಿದ್ದ ಮಂತ್ರಾಲಯದ ಸರ್ವೇ ನಂಬರ್ 273/1ರ 2 ಎಕರೆ ಜಮೀನಿನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಹಣ ಪಾವತಿ ವಿಚಾರ ಪ್ರಕರಣಕ್ಕೆ ಪ್ರಮುಖ ಕಾರಣವಾಗಿದೆ. ಆರೋಪಿಯಾಗಿರುವ ಎಸ್.ನೂರ್ ಅಹಮ್ಮದ್ ಜಮೀನಿನ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ವೆಂಕಟೇಶ್ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ನಡುವೆ ನೂರ್ ಅಹಮ್ಮದ್, ತನ್ನ ಹೆಸರಿಗೆ ನೋಂದಣಿಯಾಗಿದ್ದ ಜಮೀನನ್ನು ಸೂಗೂರಿನ ಗರೀಜ ಆನಂದ್ ಮತ್ತು ತಿಮ್ಮಯ್ಯ ಅವರಿಗೆ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಎನ್ನಲಾಗಿದೆ. ಜಮೀನು ನೋಂದಣಿ ಸಂದರ್ಭದಲ್ಲಿ ಮೃತ ಸೀತಾ ಸೇರಿದಂತೆ ಅವರ ಸಹೋದರಿಯರಾದ ಕೆ.ಗೀತಾ ಮತ್ತು ಕೆ.ಭಾಗೀರಥಿ ಅವರ ಸಹಿ ಅಗತ್ಯವಿದೆ ಎಂದು ಖರೀದಿದಾರರು ತಿಳಿಸಿದ್ದರೆನ್ನಲಾಗಿದೆ.

ಸೀತಾ ಸಹಿ ಹಾಕದೆ ತೊಂದರೆ ಮಾಡುತ್ತಿದ್ದಾರೆ; ಇದರಿಂದ ಜಮೀನು ಕೈತಪ್ಪುವ ಸಾಧ್ಯತೆ ಇದೆ ಎಂಬ ಕಾರಣದಿಂದ ಆರೋಪಿಗಳಾದ ಬೆಸ್ತಕುಮಾರ್ ಮತ್ತು ಎಸ್.ನೂರ್ ಅಹಮ್ಮದ್ ಅವರು ಮಂತ್ರಾಲಯದಲ್ಲಿ ಕೊಲೆ ಸಂಚು ರೂಪಿಸಿದ್ದಾರೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.

ಮೆಜೆಸ್ಟಿಕ್‌ಗೆ ಕರೆಸಿ ಕಾರಿನಲ್ಲಿ ಕರೆದೊಯ್ದ ಆರೋಪ

ಸಂಚಿನ ಭಾಗವಾಗಿ ಬೆಸ್ತಕುಮಾರ್, ಕೆ.ಎ.35-ಎನ್-610 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಇಂಡಿಗೋ ಕಾರಿನಲ್ಲಿ ರಘು ಅಲಿಯಾಸ್ ಮೆಂಟಲ್ ರಘು ಮತ್ತು ಸತ್ಯನಾರಾಯಣ ಅಲಿಯಾಸ್ ಸತ್ಯ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ಹೇಳಲಾಗಿದೆ.

2021ರ ಮಾರ್ಚ್ 26ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಆರೋಪಿಗಳು ಸೀತಾಳಿಗೆ ಕರೆ ಮಾಡಿ ಮೆಜೆಸ್ಟಿಕ್‌ಗೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಂದ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ತುಮಕೂರು ರಸ್ತೆ–ನೆಲಮಂಗಲ ಮಾರ್ಗವಾಗಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶಾಂತಿಗ್ರಾಮದ ಎನ್‌ಎಚ್-75 ಬಳಿಯ ಎಂಪೈರ್ ಹೋಟೆಲ್‌ಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಹೋಟೆಲ್‌ನಲ್ಲಿ ಜ್ಯೂಸ್‌ಗೆ ಸೀತಾಳಿಗೆ ತಿಳಿಯದಂತೆ ಸೈನೈಡ್ ಬೆರೆಸಿ ಕುಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಕಲ್ಲಿನಿಂದ ಹೊಡೆದು ಕೊಲೆ ಮಾಡಲು ಮತ್ತೊಂದು ಯತ್ನ

ಅದೇ ದಿನ ರಾತ್ರಿ ಕುಂದೂರು ಮಠಕ್ಕೆ ತೆರಳುವ ರಸ್ತೆಯಲ್ಲಿ ಕಾರಿನಲ್ಲಿ ಸೀತಾ ಮಲಗಿದ್ದಾಗ, ರಘು ಅಲಿಯಾಸ್ ಮೆಂಟಲ್ ರಘು ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಪ್ರಯತ್ನ ವಿಫಲವಾದ ಬಳಿಕ ತಲೆಗೆ ಗಾಯವಾಗಿದ್ದ ಸೀತಾಳನ್ನು ಮಾರ್ಚ್ 27ರಂದು ಬೆಳಿಗ್ಗೆ ಹಳೇಬೀಡಿನ ಹಮ್ರ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಬರೆದ ಔಷಧಿಗಳನ್ನು ಆರೋಪಿಗಳು ಮೆಡಿಕಲ್ ಸ್ಟೋರ್‌ನಿಂದ ಖರೀದಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಔಷಧಿ ಕ್ಯಾಪ್ಸುಲ್‌ಗೆ ಸೈನೈಡ್ ತುಂಬಿದ ಆರೋಪ

ಖರೀದಿಸಿದ ಔಷಧಿಗಳ ಪೈಕಿ CEPHALKEM-500 ಕ್ಯಾಪ್ಸುಲ್‌ಗೆ ಬೇಲೂರಿನ ಮಯೂರ ಹೋಟೆಲ್‌ನ ಬಾತ್‌ರೂಂನಲ್ಲಿ ರಘು ಅಲಿಯಾಸ್ ಮೆಂಟಲ್ ರಘು ಸೈನೈಡ್ ತುಂಬಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.

ನಂತರ ಚಿಕ್ಕಮಗಳೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುವ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸೀತಾಳಿಗೆ ಸೈನೈಡ್ ತುಂಬಿದ್ದ ಕ್ಯಾಪ್ಸುಲ್ ನುಂಗಿಸಲಾಗಿದೆ. ಇದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ತನಿಖೆಯಲ್ಲಿ ದೃಢಪಟ್ಟಿರುವುದಾಗಿ ಪ್ರಕರಣದ ವಿವರಗಳಲ್ಲಿ ತಿಳಿಸಲಾಗಿದೆ.

ಆಭರಣ ದೋಚಿ ಮೃತದೇಹ ಕಾಲುವೆಗೆ ಎಸೆದ ಆರೋಪ

ಸೀತಾ ಮೃತಪಟ್ಟ ಬಳಿಕ ಆಕೆಯ ಮೈಮೇಲಿದ್ದ ವಡವೆಗಳನ್ನು ಆರೋಪಿಗಳು ಕಳಚಿಕೊಂಡಿದ್ದಾರೆ ಎನ್ನಲಾಗಿದೆ.

ಮೃತದೇಹ ಯಾರಿಗೂ ಸಿಗಬಾರದು ಎಂಬ ಉದ್ದೇಶದಿಂದ ಭಗತ್‌ಸಿಂಗ್ ನಗರ ಸಾಯಿಬಾಬಾ ದೇವಸ್ಥಾನ ಹಾಗೂ ಹುಲಿಗೇಮ್ಮ ದೇವಸ್ಥಾನದ ರಸ್ತೆಯ ಸಮೀಪ, ತುಂಗಭದ್ರಾ ಡ್ಯಾಂ ಕಡೆಯಿಂದ ತೋರಣಗಲ್ ಕಡೆಗೆ ಸಾಗುವ ಎಚ್‌ಎಲ್‌ಸಿ (ಹೈ ಲೆವೆಲ್ ಕೆನಾಲ್) ಕಾಲುವೆಗೆ ಮೃತದೇಹವನ್ನು ಎಸೆದಿದ್ದಾರೆ ಎಂದು ತನಿಖೆಯಿಂದ ದೃಢಪಟ್ಟಿರುವುದಾಗಿ ಪ್ರಕರಣದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಜಮೀನು ವ್ಯವಹಾರದ ಹಣಕಾಸಿನ ವಿವಾದದಿಂದ ಆರಂಭವಾದ ಪ್ರಕರಣ, ಮಹಿಳೆಯ ಕೊಲೆ ಹಾಗೂ ಮೃತದೇಹವನ್ನು ನಾಶಪಡಿಸುವ ಪ್ರಯತ್ನದವರೆಗೆ ತಲುಪಿದೆ ಎಂಬ ಆರೋಪಗಳು ತನಿಖೆಯಲ್ಲಿ ದಾಖಲಾಗಿವೆ.

KEY WORDS: 

Bengaluru murder case, Murder and conspiracy case, Bengaluru court verdict, Life imprisonment, Criminal conspiracy, Abduction and murder, Destruction of evidence, 60th Additional City Civil and Sessions Court, Karnataka crime news, Bengaluru crime news

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗസയിലും വെസ്റ്റ് ബാങ്കിലും ഇസ്രഈല്‍ ചെയ്യുന്ന കാര്യങ്ങള്‍ ലോക മനസാക്ഷിക്ക് കളങ്കം: യു.കെ വിദേശകാര്യ സെക്രട്ടറി

ലണ്ടന്‍: ഗസയിലും വെസ്റ്റ് ബാങ്കിലും ഇസ്രഈല്‍ സര്‍ക്കാര്‍ ചെയ്യുന്ന കാര്യങ്ങള്‍ ലോക...

LPU Students Protest: పంజాబ్ LPUలో ఆరని మంటలు.. స్టూడెంట్స్, పోలీసుల మధ్య ఉద్రిక్తత..

LPU Students Protest: పంజాబ్‌లోని ఫగ్వారా లవ్లీ ప్రొఫెషనల్ యూనివర్సిటీ (LPU)...

JUSTKANNADA EXCLUSIVE; POCSO ಪ್ರಕರಣ,  ಆರೋಪಿಗೆ 25 ವರ್ಷ ಕಠಿಣ ಜೈಲು.

  ಮೈಸೂರು, SEP.28,2026: POCSO ಪ್ರಕರಣದಲ್ಲಿ ನಂಜನಗೂಡಿನ 40 ವರ್ಷದ ವ್ಯಕ್ತಿಗೆ...