ಮೈಸೂರು,ಸೆಪ್ಟಂಬರ್,17,2026 (www.justkannada.in): ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವು-ನೋವಿನ ನಡುವೆ ನರಳುತ್ತಿದ್ದ ಅಳಿವಿನಂಚಿನಲ್ಲಿರುವ ವನ್ಯಜೀವಿ ನರಿಯೊಂದನ್ನು ರಕ್ಷಿಸಲು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಕುಮಾರ್ ಸಿ. ಅವರು ಮಾನವೀಯತೆ ಮೆರೆದಿದ್ದಾರೆ.
ಮಡಿಕೇರಿಯಲ್ಲಿ ತಮ್ಮ ಕರ್ತವ್ಯ ಮುಗಿಸಿಕೊಂಡು ಹುಣಸೂರಿನತ್ತ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ಹುಣಸೂರು–ಪಿರಿಯಾಪಟ್ಟಣ ಮಾರ್ಗದ ಅರಸು ಕಲ್ಲಹಳ್ಳಿ ರಸ್ತೆಯಲ್ಲಿ ನರಿ ವಾಹನಕ್ಕೆ ಸಿಲುಕಿ ಗಾಯಗೊಂಡಿರುವುದನ್ನು ಕುಮಾರ್ ಅವರು ಗಮನಿಸಿದ್ದಾರೆ.
ರಸ್ತೆಯ ಮಧ್ಯಭಾಗದಲ್ಲಿ ನೋವಿನಿಂದ ನರಳುತ್ತಿದ್ದ ನರಿಯನ್ನು ಕಂಡ ಅವರು, ಕ್ಷಣವೂ ತಡಮಾಡದೆ ವಾಹನ ನಿಲ್ಲಿಸಿ ಯಾವುದೇ ಭಯವಿಲ್ಲದೆ ತಮ್ಮ ಕೈಯಲ್ಲೇ ನರಿಯನ್ನು ಎತ್ತಿಕೊಂಡು ರಸ್ತೆ ಬದಿಗೆ ಸುರಕ್ಷಿತವಾಗಿ ಇರಿಸಿದ್ದಾರೆ.
ಬಳಿಕ ಹುಣಸೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಉದಯ್ ಕುಮಾರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಬರುವವರೆಗೂ ಸುಮಾರು ಒಂದು ಗಂಟೆ ಸ್ಥಳದಲ್ಲೇ ಕಾದು, ಗಾಯಗೊಂಡ ವನ್ಯಜೀವಿಯನ್ನು ಅವರ ವಶಕ್ಕೆ ಒಪ್ಪಿಸಿದ ಬಳಿಕ ಕುಮಾರ್ ಅವರು ಅಲ್ಲಿಂದ ತೆರಳಿದ್ದಾರೆ.
ಇಂದು ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗಾಯಗೊಂಡ ವನ್ಯಜೀವಿಯೊಂದರ ಜೀವ ಉಳಿಸಲು ಅಧಿಕಾರಿಯೊಬ್ಬರು ತೋರಿದ ಈ ಕಾಳಜಿ ಗಮನ ಸೆಳೆದಿದೆ.
ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲ, ಮೂಕ ಜೀವಿಯ ನೋವಿಗೂ ಸ್ಪಂದಿಸುವ ಹೃದಯವಂತಿಕೆ ಸಮಾಜಕ್ಕೆ ಅಗತ್ಯ. ಕುಮಾರ್ ಸಿ. ಅವರ ಈ ಮಾನವೀಯ ನಡೆ ನಿಜಕ್ಕೂ ಶ್ಲಾಘನೀಯವಾಗಿದ್ದು, ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.
ಮೂಕ ಜೀವಿಯ ನೋವಿಗೆ ಮಿಡಿದ ಅಧಿಕಾರಿ… ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
Key words: CHESCOM officer, humanity, rescuing, injured fox.





