ಬೆಂಗಳೂರು,ಆಗಸ್ಟ್,19,2026 (www.justkannada.in): ರಾಜ್ಯದ ಸರ್ಕಾರಿ ಭೂಮಿಯನ್ನು ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಹೊರತುಪಡಿಸಿ ಬಲಾಢ್ಯ ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳಿಗೆ ನೀಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಒತ್ತಾಯಿಸಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ಮಾತನಾಡಿದ ಕೆ.ಶಿವಕುಮಾರ್ ಅವರು, ನಂಜನಗೂಡಿನ ನೇರಳೆ, ಕೊಳ್ಳೇಗಾಲದ ಮಾಂಬಳ್ಳಿ ಸೇರಿದಂತೆ ರಾಜ್ಯದ ಬಹಳಷ್ಟು ಗ್ರಾಮಗಳಲ್ಲಿ ಶವಸಂಸಾರಕ್ಕೆ ಜಾಗದ ಕೊರತೆಯಿದ್ದು, ಅಲ್ಲಿನ ಜನರು ಪರದಾಡುವಂತಾಗಿದೆ. ಶವಗಳನ್ನು ನದಿಯ ದಂಡೆಗಳಲ್ಲಿ ಹೂಳುವ ಶೋಚನೀಯ ಸ್ಥಿತಿ ಎದುರಾಗಿದೆ ಎಂದರು.
ರಾಜ್ಯದಲ್ಲಿ ಅರಣ್ಯ ಮತ್ತು ಕೃಷಿ ಭೂಮಿ ಹೊರತುಪಡಿಸಿ ಪ್ರಸ್ತುತ 3,25,177 ಎಕರೆಯಷ್ಟು ಸರ್ಕಾರಿ ಭೂಮಿ ಇದ್ದು, ಎಲ್ಲಾ ಜಿಲ್ಲೆಗಳಲ್ಲಿನ ವಿವಿಧ 3730 ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಹಿಂದೂ ಹಾಗೂ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಅನೇಕ ಬಲಾಢ್ಯ ಶೈಕ್ಷಣಿಕ ಸಂಸ್ಥೆಗಳು, ಎನ್ ಜಿಒ, ಟ್ರಸ್ಟ್ ಗಳು ನಿರ್ದಿಷ್ಟ ಉದ್ದೇಶಕ್ಕಾಗಿ ಸರ್ಕಾರಿ ಭೂಮಿ ಪಡೆದು ಆ ಉದ್ದೇಶಕ್ಕೆ ಬಳಸದೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರಿ ಭೂಮಿಯು ಕಡಿಮೆಯಿದ್ದು, ಭೂ ರಹಿತರಿಗೆ, ಸ್ಮಶಾನಗಳಿಗೆ ಹಾಗೂ ನವೋದ್ಯಮ ಕೈಗಾರಿಕ ಮತ್ತು ಹೊಸ ಶೈಕ್ಷಣಿಕ ಸಂಸ್ಥೆಗಳಿ ಮಾತ್ರ ಸಾಮಾಜಿಕ ನ್ಯಾಯದ ಅನುಸಾರ ಮಂಜೂರು ಮಾಡಿ ಡಿ.ದೇವರಾಜ ಅರಸರ ಭೂ ಸುಧಾರಣೆ ಕಾಯ್ದೆಯಂತೆ ಮತ್ತೊಂದು ಕ್ರಾಂತಿ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ವಿವಿಧ ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರೂ, ಮರಳಿ ಸರ್ಕಾರಿ ಭೂಮಿಯನ್ನು ಪಡೆದು ಉದ್ಧೇಶಿತ ಯೋಜನೆಗೆ ಬಳಸದೆ ಖಾಲಿ ಉಳಿಸಿಕೊಂಡಿದ್ದಾರೆ. ಇಂತಹ ಸಂಸ್ಥೆಗಳಿಗೆ ನೀಡಿರುವ ಭೂಮಿಯನ್ನು ಸರ್ಕಾರವು ಕಟ್ಟುನಿಟ್ಟಾಗಿ ಹಿಂಪಡೆಬೇಕು ಎಂದು ಹೇಳಿದರು.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿ, ಸದಸ್ಯರು ಉತ್ತಮವಾದ ಪ್ರಶ್ನೇ ಕೇಳಿದ್ದಾರೆ. ನಿರ್ದಿಷ್ಟ ಉದ್ದೇಶಕ್ಕಾಗಿ ಪಡೆದ ಸರ್ಕಾರಿ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಸದೆ ದುರುಪಯೋಗ ಮಾಡಿಕೊಂಡ ಸಂಸ್ಥೆಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ನೋಟಿಸ್ ನೀಡಲಾಗುತ್ತಿದೆ ಎಂದರು.
ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡುವುದನ್ನು ತಡೆದು ರಕ್ಷಣೆ ಮಾಡುವ ಸಲುವಾಗಿ ಹಾಗೂ ನಿರ್ದಿಷ್ಟ ಯೋಜನೆಗೆ ಬಳಸದ ಪ್ರಕರಣವನ್ನು ಪತ್ತೆಹಚ್ಚಲು ಹೊಸ ಸಾಫ್ಟ್ ವೇರ್ ರೂಪಿಸಲಾಗುತ್ತಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
Key words: Government land, powerful, educational, religious, institutions, MLC, K. Shivakumar
The post ಬಲಾಢ್ಯ ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡಬಾರದು: MLC ಕೆ.ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





