21
June, 2026

A News 365Times Venture

21
Sunday
June, 2026

A News 365Times Venture

ಜ್ಞಾನಾಧಾರಿತ, ಸಮಗ್ರ ಸಮಾಜ ನಿರ್ಮಾಣದಲ್ಲಿ ದೂರ ಶಿಕ್ಷಣದ ಪಾತ್ರ ಮಹತ್ವದ್ದು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Date:

ಮೈಸೂರು, ಜೂನ್, 20,2026 (www.justkannada.in):  ಜ್ಞಾನವನ್ನು ಸಾರ್ವತ್ರಿಕಗೊಳಿಸುವ ಮತ್ತು ಶಿಕ್ಷಣವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಹೇಳಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಆಯೋಜಿಸಿದ್ದ “ಪ್ರವೇಶದಿಂದ ಶ್ರೇಷ್ಠತೆಯೆಡೆಗೆ: ದೂರ ಶಿಕ್ಷಣದ ಭವಿಷ್ಯದ ಹಾದಿಗಳು” ವಿಷಯದ ಶೈಕ್ಷಣಿಕ ಸಭೆ ಹಾಗೂ ಮಾಜಿ ಕುಲಪತಿ ಪ್ರೊ. ಎನ್.ಎಸ್. ರಾಮೇಗೌಡ ರಚಿಸಿರುವ “ಶಿಕ್ಷಣ: ಔಪಚಾರಿಕ, ಮುಕ್ತ ಮತ್ತು ದೂರಶಿಕ್ಷಣದ ಅವಲೋಕನ” ಕೃತಿ ಬಿಡುಗಡೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಕೆಎಸ್‌ ಒಯು ಉಪಕುಲಪತಿ ಪ್ರೊ. ಶರಣಪ್ಪ ವಿ. ಹಾಲ್ಸೆ ಹಾಗೂ ಅವರ ತಂಡವನ್ನು ಅಭಿನಂದಿಸಿದ ರಾಜ್ಯಪಾಲರು,” ಇಂದಿನ ಚರ್ಚೆಯ ವಿಷಯವು ಭಾರತದ ಉನ್ನತ ಶಿಕ್ಷಣದ ಭವಿಷ್ಯದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದು, ಶಿಕ್ಷಣವನ್ನು ಪ್ರಜಾಪ್ರಭುತ್ವೀಕರಿಸುವ ಹಾಗೂ ಜ್ಞಾನವನ್ನು ಸಾರ್ವತ್ರಿಕಗೊಳಿಸುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಶಿಕ್ಷಣ ಕ್ಷೇತ್ರವು ತಂತ್ರಜ್ಞಾನ, ಡಿಜಿಟಲ್ ಸಂಪನ್ಮೂಲಗಳು ಮತ್ತು ನವೀನ ಬೋಧನಾ ವಿಧಾನಗಳಿಂದ ಅಭೂತಪೂರ್ವ ಬದಲಾವಣೆಗಳನ್ನು ಅನುಭವಿಸುತ್ತಿದೆ. ಇದರಿಂದ ಶಿಕ್ಷಣವು ಹೆಚ್ಚು ಸುಲಭವಾಗಿ ಲಭ್ಯವಾಗುವ, ಸಮಗ್ರ ಮತ್ತು ಪರಿಣಾಮಕಾರಿ ವ್ಯವಸ್ಥೆಯಾಗಿ ರೂಪುಗೊಂಡಿದೆ. ವಿಶೇಷವಾಗಿ, ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಗಳು ಸಾಮಾಜಿಕ, ಆರ್ಥಿಕ ಹಾಗೂ ಭೌಗೋಳಿಕ ಕಾರಣಗಳಿಂದ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬಾಗಿಲುಗಳನ್ನು ತೆರೆದಿವೆ ಎಂದು ಅವರು ತಿಳಿಸಿದರು.

ಮಹಿಳಾ ಸಬಲೀಕರಣದಲ್ಲಿ ದೂರ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದ ರಾಜ್ಯಪಾಲರು, ಕುಟುಂಬದ ಜವಾಬ್ದಾರಿಗಳಿಂದ ಅನೇಕ ಮಹಿಳೆಯರು ನಿಯಮಿತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ದೂರ ಶಿಕ್ಷಣದ ಮೂಲಕ ಅವರು ಮನೆಯಿಂದಲೇ ಶಿಕ್ಷಣವನ್ನು ಪಡೆದು ಸ್ವಾವಲಂಬಿಗಳಾಗಬಹುದು. ಇದೇ ರೀತಿ ಅಂಗವಿಕಲರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೂ ಇದು ಮಹತ್ವದ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ಜಗತ್ತು ಇಂದು ಜ್ಞಾನಾಧಾರಿತ ಆರ್ಥಿಕತೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಭಾರತವು ಸಮಗ್ರ ಮತ್ತು ಮಾನವೀಯ ಮೌಲ್ಯಗಳ ಆಧಾರಿತ ಶಿಕ್ಷಣ ಮಾದರಿಯನ್ನು ಜಗತ್ತಿಗೆ ನೀಡುವ ಅವಕಾಶವನ್ನು ಹೊಂದಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು. ಭಾರತದ ಪ್ರಾಚೀನ ಜ್ಞಾನ ಪರಂಪರೆ ಮತ್ತು ಆಧುನಿಕ ತಾಂತ್ರಿಕ ಸಾಮರ್ಥ್ಯಗಳ ಸಮನ್ವಯವು ದೂರ ಶಿಕ್ಷಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲದು. ಗುಣಮಟ್ಟ, ನಾವೀನ್ಯತೆ ಮತ್ತು ಸಮಾನ ಅವಕಾಶಗಳಿಗೆ ಆದ್ಯತೆ ನೀಡಿದರೆ ಭಾರತವು ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯ ಪಾತ್ರ ವಹಿಸಲಿದೆ ಎಂದು ಹೇಳಿದರು.

ಮಾಜಿ ಕುಲಪತಿ ಪ್ರೊ. ಎನ್.ಎಸ್. ರಾಮೇಗೌಡ ಅವರ ‘ಶಿಕ್ಷಣ: ಔಪಚಾರಿಕ, ಮುಕ್ತ ಮತ್ತು ದೂರಶಿಕ್ಷಣದ ಅವಲೋಕನ’ ಕೃತಿ ಕುರಿತು ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಈ ಪುಸ್ತಕವು ಔಪಚಾರಿಕ, ಮುಕ್ತ ಹಾಗೂ ದೂರ ಶಿಕ್ಷಣದ ಪರಿಕಲ್ಪನೆಗಳು, ಅವುಗಳ ಬೆಳವಣಿಗೆ, ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳ ಕುರಿತು ಸಮಗ್ರ ಪರಿಚಯ ನೀಡುತ್ತದೆ. ಶಿಕ್ಷಣ ಕ್ಷೇತ್ರದ ನೀತಿ ನಿರೂಪಕರು, ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಗೆ ಇದು ಉಪಯುಕ್ತ ಮಾರ್ಗದರ್ಶಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೇಖಕರಾದ ಪ್ರೊ. ಎನ್.ಎಸ್. ರಾಮೇಗೌಡ ಅವರನ್ನು ಅಭಿನಂದಿಸಿದ ರಾಜ್ಯಪಾಲರು, ಈ ಕೃತಿಯು ಮುಕ್ತ ಮತ್ತು ದೂರ ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನ ವೃದ್ಧಿ ಹಾಗೂ ನಾವೀನ್ಯತೆಗೆ ಹೊಸ ದಿಕ್ಕನ್ನು ನೀಡಲಿದೆ ಎಂದು ಆಶಿಸಿದರು.

ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಮತ್ತು ಆನ್‌ ಲೈನ್ ಕಲಿಕಾ ವೇದಿಕೆಗಳ ಬಳಕೆಯಿಂದ ಶಿಕ್ಷಣವು ಇನ್ನಷ್ಟು ಸುಲಭ, ಹೊಂದಿಕೊಳ್ಳುವ ಮತ್ತು ಗುಣಮಟ್ಟಯುತವಾಗಲಿದೆ. ಕೌಶಲ್ಯಾಭಿವೃದ್ಧಿ, ನಾವೀನ್ಯತೆ ಹಾಗೂ ಬಹುಶಿಸ್ತೀಯ ಅಧ್ಯಯನಗಳನ್ನು ಉತ್ತೇಜಿಸುವ ಮೂಲಕ ಉದ್ಯೋಗ ಸೃಷ್ಟಿ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಮಗ್ರ ಸಮಾಜ ನಿರ್ಮಾಣಕ್ಕೆ ಇದು ಮಹತ್ವದ ಕೊಡುಗೆ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಮಹಾರಾಜರು, ಶಾಸಕ ಕೆ. ಹರೀಶ್ ಗೌಡ, ಕೆಎಸ್‌ಒಯು ಕುಲಪತಿ ಪ್ರೊ. ಶರಣಪ್ಪ ವಿ. ಹಾಲ್ಸೆ, ರಿಜಿಸ್ಟ್ರಾರ್ ಪ್ರೊ. ಎಸ್.ಕೆ. ನವೀನ್ ಕುಮಾರ್, ಡೀನ್ ಅಕಾಡೆಮಿಕ್ಸ್ ಪ್ರೊ. ಎಂ. ರಾಮನಾಥಂ ನಾಯ್ಡು, ಮಾಜಿ ಕುಲಪತಿ ಪ್ರೊ. ಎನ್.ಎಸ್. ರಾಮೇಗೌಡ, ಮಾಜಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಮಾಜಿ ಡೀನ್ ಪ್ರೊ. ಚಂಬಿ ಪುರಾಣಿಕ್ ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಬೋಧಕ ವರ್ಗ, ವಿದ್ಯಾರ್ಥಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

Key words: KSOU, Distance education, Governor, Thawar Chand Gehlot

The post ಜ್ಞಾನಾಧಾರಿತ, ಸಮಗ್ರ ಸಮಾಜ ನಿರ್ಮಾಣದಲ್ಲಿ ದೂರ ಶಿಕ್ಷಣದ ಪಾತ್ರ ಮಹತ್ವದ್ದು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

UP: అమిత్ షాతో ఎస్పీ ఎంపీ భేటీ!.. అఖిలేష్ యాదవ్‌కు భారీ ఝలక్ తప్పదా?

ప్రస్తుతం దేశంలో ఫిరాయింపు రాజకీయాలు నడుస్తున్నాయి. తొలుత పశ్చిమ బెంగాల్‌తో మొదలైన...

ಸಂಘದ ಹೆಸರು, ಲೆಟರ್ ಹೆಡ್ ದುರ್ಬಳಕೆ: ಪೊಲೀಸ್ ಮಹಾ ನಿರ್ದೇಶಕರಿಗೆ KUWJ ದೂರು

ಬೆಂಗಳೂರು,ಜೂನ್,20,2026 (www.justkannada.in): ಟ್ರೇಡ್ ಯೂನಿಯನ್ ಆ್ಯಕ್ಟ್ 1956 ಪ್ರಕಾರ ಕಾರ್ಮಿಕ...

‘വെള്ളക്കുപ്പായക്കാരനായ ആ ഉന്നത രാഷ്ട്രീയ നേതാവ് വേട്ടക്കാരനൊപ്പം’: ‘അവള്‍ക്കാപ്പം’ പുസ്തകത്തില്‍ ഗുരുതര വെളിപ്പെടുത്തല്‍

കൊച്ചി:മാധ്യമ പ്രവര്‍ത്തകന്‍ ആര്‍ റോഷിപാലിന്റെ ‘അവള്‍ക്കൊപ്പം’ പുസ്തകത്തില്‍ കേരളത്തിലെ ഒരു ഉന്നത...

“இன்னும் அவர் தன்னை அமைச்சராகவே நினைத்துக்கொண்டிருக்கிறார்" – TRB ராஜா குறித்து அமைச்சர் கீர்த்தனா!

தமிழ்நாட்டில் துவங்கவிருந்த நிறுவனங்கள் ஆந்திர மாநிலத்திற்குச் சென்றதாகக் கூறப்படும் புகார்கள்...