ನವದೆಹಲಿ, ಫೆ.04, 2025 (www.justkannada.in): ಇದೇ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬರುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಮೊದಲಿಗೆ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ಮಾಡಿದ ಸಚಿವರು, ನಂತರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಅಲ್ಲಿಂದ ಜೋಶಿ ಅವರ ಸಂಸತ್ತಿನ ಕಚೇರಿಗೆ ತೆರಳಿದ ಪಾಟೀಲರು, ಅವರ ಕಚೇರಿಯಲ್ಲಿ ಸಮಾವೇಶ ಕುರಿತು ರಾಜ್ಯದ ನಾಯಕರೊಂದಿಗೆ ಸಭೆ ನಡೆಸಿದರು.
ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಂಡ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದರು.
ಪಾಟೀಲ ಅವರು ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ, ಸಮಾವೇಶಕ್ಕೆ ಆಹ್ವಾನಿಸಲಿದ್ದಾರೆ.
The post ಹೂಡಿಕೆದಾರರ ಸಮಾವೇಶ: ರಾಜನಾಥ್ ಸಿಂಗ್, ಎಚ್ ಡಿಕೆ, ಜೋಶಿಗೆ ಖುದ್ದು ಆಹ್ವಾನ ನೀಡಿದ ಎಂ.ಬಿ.ಪಾಟೀಲ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.