ಕೊಡಗು, ಜನವರಿ, 31,2025 (www.justkannada.in): ರಾಜ್ಯದ ಮನವಿ ಆಲಿಸಲು ಕೇಂದ್ರ ಸರ್ಕಾರ ಕಿವುಡಾಗಿದೆ. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾಳೆ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಿವುಡಾಗಿದೆ. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ ಎಂದು ಹೇಳಿದ್ದೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುತ್ತೇವೆ. ದೆಹಲಿಗೆ ಹೋಗಿ ತೆರಿಗೆ ಹಂಚಿಕೆಯಲ್ಲಿ ಕಡಿಮೆ ಅನುದಾನ ಬರುತ್ತಿದೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ಶಾಸಕರು , ಸಂಸದರು, ಸಚಿವರು ದೆಹಲಿಯಲ್ಲಿಯೇ ಪ್ರತಿಭಟನೆ ಮಾಡಿದೆವು. ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ ಎಂದರು.
ಕಾಮಗಾರಿಗೆ ಅನುದಾನ ನೀಡಿ ಶೀಘ್ರಗತಿಯಲ್ಲಿ ಪೂರ್ಣ
ಒಂಭತ್ತು ವರ್ಷಗಳ ನಂತರ ಮೇಲ್ಸೇತುವೆ ಉದ್ಘಾಟನೆಯಾಗುತ್ತಿರುವ ಬಗ್ಗೆ ಮಾತನಾಡಿ 2016 ರಲ್ಲಿ ನಮ್ಮ ಸರ್ಕಾರ ಕಾಮಗಾರಿಗೆ ಮಂಜೂರಾತಿ ಕೊಟ್ಟು, 2017 ರಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರ ಅದನ್ನು ಪೂರ್ಣ ಮಾಡದೇ ವಿಳಂಬವಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನವನ್ನು ನೀಡಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ ಎಂದರು.
ಕೊಡಗಿನಲ್ಲಿ ಸಿ ಅಂಡ್ ಡಿ ಭೂಮಿ ಮತ್ತು ಸೆಕ್ಷನ್ 4 ಅಧಿಸೂಚಿತ ಜಾಗವನ್ನು ಮೀಸಲು ಅರಣ್ಯ ಮಾಡುವ ಪ್ರಸ್ತಾವಕ್ಕೆ ರೈತರು ವ್ಯಾಪಕ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಕುರಿತು ಸಮಿತಿ ರಚಿಸಬೇಕಾಗುತ್ತದೆ. ಸಮಿತಿ ವರದಿ ಕೊಟ್ಟ ನಂತರ ಸರ್ಕಾರ ಕ್ರಮ ವಹಿಸಲಿದೆ ಎಂದರು.
ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ
ಸರ್ಕಾರಿ ಭೂಮಿ ಭೂ ಗುತ್ತಿಗೆ ನೀಡುವುದಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಮಾತನಾಡಿ ಸರ್ಕಾರಿ ಭೂಮಿ ಕೊಟ್ಟರೆ ವಿರೋಧ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ನಿವೇಶನ ಇಲ್ಲದಿರುವವರಿಗೆ, ಜಮೀನು ಇಲ್ಲದವರಿಗೂ ಭೂಮಿ ಕೊಡುತ್ತೇವೆ ಎಂದರು.
ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ
ವನ್ಯಜೀವಿ ಮಾನವ ಸಂಘರ್ಷ ಕಾಡಿಂಚಿನ ಊರುಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಆನೆಗಳು, ಚಿರತೆಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ. ಹಾಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ವನ್ಯಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ ಕೈಕೊಳ್ಳಲಾಗುವುದು ಎಂದರು.
ಕಾವೇರಿ ನದಿ ಸ್ವಚ್ಛತೆಯ ಬಗ್ಗೆ ರಚಿಸಲಾಗಿದ್ದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ನೀಡಿದ ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
Key words: Central government, tax, share, CM Siddaramaiah
The post ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಕಿವುಡು: ನ್ಯಾಯಯುತ ತೆರಿಗೆ ಪಾಲು ಪಡೆಯಲು ನಿರಂತರ ಪ್ರಯತ್ನ-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.