ಮೈಸೂರು,ಸೆಪ್ಟಂಬರ್,22,2026 (www.justkannada.in) ಕಾಲೇಜು ಮುಂಭಾಗ ನಿಂತಿದ್ದ ವೇಳೆ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಈ ಘಟನೆ ನಡೆದಿದೆ. 19 ವರ್ಷದ ಪ್ರಿತೇಶ್ ಜೈನ್ ಅಪಘಾತದಲ್ಲಿ ಮೃತ ವಿದ್ಯಾರ್ಥಿ. ಕೋರ್ಸ್ ಪೂರ್ಣಗೊಳಿಸಿ ಉದ್ಯೋಗಕ್ಕೂ ಆಯ್ಕೆಯಾಗಿದ್ದ ವಿದ್ಯಾರ್ಥಿ ಪ್ರಿತೇಶ್ ಜೈನ್ ನೇಮಕಾತಿ ಪ್ರಮಾಣಪತ್ರ ಪಡೆಯಲು ಕಾಲೇಜಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗದ್ದು ಅಪಘಾತದ ರಭಸಕ್ಕೆ ವಿದ್ಯಾರ್ಥಿಗೇ ಗಂಭೀರ ಗಾಯಗಳಾಗಿದ್ದು ಪ್ರಿತೇಶ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಅಪಘಾತ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದು ಬೆಂಗಳೂರು ನೋಂದಣಿ ಕಾರನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿ ಸಾವಿನಿಂದ ಜೆಎಸ್ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿನ್ನೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಲೇಜು ಮುಂಭಾಗ ವೇಗ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ರಸ್ತೆ ಸಂಚಾರ ನಿಯಮಗಳ ಫಲಕ ಅಳವಡಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ನಂಜನಗೂಡು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರು ಚಾಲಕನಿಗಾಗಿ ಸಂಚಾರ ಠಾಣೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
Key words: Student, die, car , Accident, Nanjanagud





