ಮೈಸೂರು,ಸೆಪ್ಟಂಬರ್,17,2026 (www.justkannada.in): 20 ವರ್ಷ ಪೂರೈಸಿರುವ ಎಸ್ ಸಿ ಎಸ್ ಟಿ ಪತ್ರಕರ್ತರ ಪತ್ರಿಕೆಗಳಿಗೆ ಒಂದು ಪುಟ ಹೆಚ್ಚುವರಿಯಾಗಿ ಜಾಹೀರಾತು ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್ ಸಿ ಕೆ. ಶಿವಕುಮಾರ್, ಈ ಹಿಂದೆ ಎಸ್ ಸಿ ಎಸ್ ಟಿ ಪತ್ರಕರ್ತರಿಗೆ 40 ಲಕ್ಷ ರೂ. ಸಾಲ ನೀಡಲಾಗುತ್ತಿತ್ತು. ಆದರೆ ಇದನ್ನ ಹಿಂದಿನ ಸರ್ಕಾರ ರದ್ದು ಮಾಡಿದ್ದು. ಈ ಸಾಲ ನೀಡುವ ಯೋಜನೆಯನ್ನ ಮತ್ತೆ ಜಾರಿಗೆ ತರಬೇಕು, ಆರ್ಥಿಕವಾಗಿ ಅವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರ ಹೆಸರಲ್ಲಿ ದತ್ತಿ ಪ್ರಶಸ್ತಿ ಘೋಷಣೆ…
ಪತ್ರಿಕೋದ್ಯಮದಲ್ಲಿ ( ಮುದ್ರಣ, ದೃಶ್ಯ ಮತ್ತು ಆಧುನಿಕ ಸುದ್ಧಿ ಮಾಧ್ಯಮ )ನಲ್ಲಿ ವೃತ್ತಿಪರವಾಗಿ ಕೆಲಸ ಮಾಡುತ್ತಿರುವ ಪರಿಶಿಷ್ಠ ಜಾತಿ/ವರ್ಗಗಳ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದಲ್ಲಿ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ನೀಡಲು ಎರಡು ಲಕ್ಷ ರೂಪಾಯಿಗಳ ದತ್ತಿ ನಿಧಿ ನೀಡಲಾಗುತ್ತಿದೆ. ರಾಜ್ಯದಲ್ಲಿ 2001 ರಲ್ಲಿ ದಲಿತ ಪತ್ರಕರ್ತರಿಗೆ ವಾರ್ತಾ ಇಲಾಖೆ ಮೂಲಕ ತರಬೇತಿ, ವೃತ್ತಿ ಕೌಶಲ್ಯ ಕಾರ್ಯಾಗಾರ ನಡೆಸುವ ಮೂಲಕ ಪತ್ರಿಕೋದ್ಯಮದಲ್ಲಿ ದಲಿತರ ಸಹಭಾಗಿತ್ವವನ್ನು ನೆಲೆಗೊಳಿಸಲು ಮುಂದಾದ ಮತ್ತು ದಲಿತರ ಸಬಲೀಕರಣಕ್ಕೆ ದುಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿನಲ್ಲಿ ಪ್ರತಿವರ್ಷ ಓರ್ವ ಸಾಧಕ ಪತ್ರಕರ್ತರಿಗೆ ರಾಜ್ಯಮಟ್ಟದ ” ದತ್ತಿ ಪ್ರಶಸ್ತಿ” ನೀಡಲು ಒಂದು ಲಕ್ಷ ರೂ. ಗಳ ದತ್ತಿ ನಿಧಿ ನೀಡಲಾಗುವುದು.
ಹಾಗೆಯೇ ದಲಿತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಕೊಟ್ಟ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೆಸರಿನಲ್ಲಿ “ದತ್ತಿನಿಧಿ ಪ್ರಶಸ್ತಿ” ಯನ್ನು ದಲಿತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬೆಳಕಿಗೆ ತಂದ ಕ್ರಿಯಾಶೀಲ ದಲಿತ ಅಥವಾ ದಲಿತ ಸಂವೇದನೆಯುಳ್ಳ ದಲಿತೇತರ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ನೀಡಲಾಗುವುದು. ಅದಕ್ಕಾಗಿ 1 ಲಕ್ಷ ರೂ ನಿಧಿ ನೀಡಲಾಗುತ್ತಿದೆ ಎಂದು ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದರು.
ಮಾತು ಮುಂದುವರೆಸಿದ ಕೆ.ಶಿವಕುಮಾರ್ ಅವರು, ಇಂದಿನ ಕಾಲದಲ್ಲಿ ಪತ್ರಿಕೆಗಳನ್ನ ನಡೆಸುವುದು ಬಹಳ ಕಷ್ಟವಾಗಿಎ. ಪತ್ರಿಕೆ ನಡೆಸುವ ಎಸ್ ಸಿ ಎಸ್ ಟಿ ಮತ್ತು ಹಿಂದುಳಿದ ವರ್ಗದವರಿಗೆ ದಮನಿತರ ಸಮಾಜದ ಸುದ್ದಿ ಹಾಕಬೇಕು ಎಂಬ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ಅವರೆಲ್ಲರಿಗೂ ಆದ್ಯತೆ ನೀಡಬೇಕಾಗುತ್ತದೆ ಎಂದರು.
ಪತ್ರಿಕೋದ್ಯಮದಲ್ಲೂ ಯಾಕೆ ಆರ್ಥಿಕ ಒಳಗೊಳ್ಳುವಿಕೆ, ಸಾಮಾಜಿಕ ಒಳಗೊಳ್ಳುವಿಕೆಯ ಬಗ್ಗೆ ಮಾತನಾಡಬಾರದು ಎಂದು ಪ್ರಶ್ನಿಸಿದ ಕೆ.ಶಿವಕುಮಾರ್, ಯಾವುದೋ ಒಂದು ಸಮುದಾಯಕ್ಕೆ ಪಂಗಡಕ್ಕೆ ಪತ್ರಿಕೆ ಮಾಡಲು ಆಗುವುದಿಲ್ಲ. ರಾಜಕೀಯ ಪಕ್ಷಗಳ ಮುಖವಾಣಿಗಳಾಗಿ ಕೆಲವು ಪತ್ರಿಕೆಗಳು ಬರುತ್ತಿವೆ. ಈ ರೀತಿ ಮಾಧ್ಯಮಗಳು ಆಗಬಾರದು. ಎಸ್ ಸಿ, ಎಸ್ ಟಿ ಸಮುದಾಯದ ಹಕ್ಕುಗಳ ಬಗ್ಗೆ, ಇವರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಇವರ ಮೇಲಾಗುವ ದೌರ್ಜನ್ಯಗಳ ಬಗ್ಗೆ ಮಾಧ್ಯಮಗಳ ಹೆಚ್ಚು ಪರಿಣಾಮ ಬೀರಿದರೇ ತಳ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದರು.
Key words: Additional advertisements, SC/ST journalists, newspapers, MLC, K. Shivakumar, Mysore





