7
July, 2026

A News 365Times Venture

7
Tuesday
July, 2026

A News 365Times Venture

ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ ಉ.ಕರ್ನಾಟಕ ಪ್ರವಾಸ ಆರಂಭ ಖುಷಿ ಕೊಟ್ಟಿದೆ- ಸಿಎಂ ಡಿಕೆ ಶಿವಕುಮಾರ್

Date:

ಬೀದರ್,ಜುಲೈ,6,2026 (www.justkannada.in): ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಇಂದಿನಿಂದ ಆರಂಭಿಸಿದ್ದೇನೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ; ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿ ಸಮಗ್ರ ಪ್ರಗತಿ ಪರಿಶೀಲನೆ ನಡೆಸುವುದು ನನ್ನ ಉದ್ದೇಶ ಮತ್ತು ಗುರಿ ಆಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದಿನಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಾದಿ ಶರಣರ ಸಮಾನತೆಯ ನೆಲೆ ಬಸವಕಲ್ಯಾಣದಿಂದಲೇ ಆರಂಭಿಸಿದ್ದೇನೆ. ಸೂಫಿ ಸಂತರ ಸಾಮರಸ್ಯದ ಪರಂಪರೆಗೂ ಹೆಸರಾದ ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳಿಂದಲೇ ನಾನು ನನ್ನ ಪ್ರವಾಸವನ್ನು ಆರಂಭಿಸುತ್ತಿರುವುದು ನನಗೆ ಖುಷಿಕೊಟ್ಟಿದೆ. ಜೊತೆಗೆ ಈ ಭಾಗದ ಜನರ ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿ ಆಗಲು ಬಯಸಿದ್ದೇನೆ ಎಂದರು.

ಜಗತ್ತಿಗೆ ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಸಂದೇಶ ನೀಡಿದ ಬಸವಾದಿ ಶರಣರ ಅನುಭವ ಮಂಟಪದ ಐತಿಹಾಸಿಕ ಪರಂಪರೆ ಒಂದೆಡೆಯಾದರೆ, ಕಲ್ಯಾಣ ಕರ್ನಾಟಕದಾದ್ಯಂತ ಧರ್ಮಸೌಹಾರ್ದ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ಸೂಫಿ ಸಂತರ ಶ್ರೀಮಂತ ಸಂಸ್ಕೃತಿ ಉತ್ತರ ಕರ್ನಾಟಕದ ಮಣ್ಣಿನಲ್ಲಿದೆ ಎಂದು ನಂಬಿದವನು ನಾನು.

ವೈವಿಧ್ಯತೆಯಲ್ಲಿ ಏಕತೆ ಮತ್ತು ಸರ್ವಧರ್ಮ ಸಮಭಾವದ ಸಂದೇಶ ಸಾರುವ ಈ ನೆಲದಿಂದ ಅಭಿವೃದ್ಧಿಯ ಹೊಸ ಪರ್ವಕ್ಕೆ ಚಾಲನೆ ನೀಡುತ್ತಿರುವುದು ನಮ್ಮ ಸರ್ಕಾರದ ಸಮಗ್ರ, ಸಮಾನ ಮತ್ತು ಜನಕೇಂದ್ರಿತ ಆಡಳಿತದ ಸಂಕಲ್ಪವಾಗಿದೆ. ಎರಡು ದಿನಗಳ ಪ್ರವಾಸದಲ್ಲಿ ನಾನು ಬೀದರ್‌ ಹಾಗೂ ಕಲಬುರಗಿ  ಜಿಲ್ಲೆಗಳ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ. ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಕೈಗಾರಿಕೆ, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಪ್ರಗತಿಯನ್ನು ಇಲಾಖೆವಾರು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಸಂವಿಧಾನದ ಪರಿಚ್ಛೇದ 371(J) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯನ್ನು ನಮ್ಮ ಸರ್ಕಾರ ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿದೆ. ಶಿಕ್ಷಣ, ಕೃಷಿ, ಕೈಗಾರಿಕೆ, ಉದ್ಯೋಗ, ನೀರಾವರಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸಲು ಹಾಗೂ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸಿ ಫಲಿತಾಂಶ ಆಧಾರಿತ ಆಡಳಿತಕ್ಕೆ ಚುರುಕು ನೀಡಲು ಈ ಪ್ರವಾಸ ಮಹತ್ವದ ವೇದಿಕೆಯಾಗಲಿದೆ ಎಂದು ಭಾವಿಸಿ ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ. ಜಿಲ್ಲಾ ಮಟ್ಟದಲ್ಲಿಯೇ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು, ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಚುರುಕು ನೀಡುವುದು ನನ್ನ ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು ಎಂಬ ಸರ್ಕಾರದ ದೃಢ ಬದ್ಧತೆಯ ಭಾಗವಾಗಿಯೇ ನಾನು ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಕಲ್ಯಾಣ ಕರ್ನಾಟಕದಿಂದ ಆರಂಭಿಸಿದ್ದೇನೆ. ಇದು ಕೇವಲ ಆಡಳಿತಾತ್ಮಕ ಪ್ರವಾಸವಲ್ಲ; ಪ್ರಾದೇಶಿಕ ಸಮತೋಲನ, ಸಮಗ್ರ ಅಭಿವೃದ್ಧಿ ಮತ್ತು ಜನಕೇಂದ್ರಿತ ಆಡಳಿತಕ್ಕೆ ನಿಮ್ಮೆಲ್ಲರ ಸರ್ಕಾರ ನೀಡುತ್ತಿರುವ ಆದ್ಯತೆಯ ಸ್ಪಷ್ಟ ಸಂದೇಶವಾಗಿದೆ.

ಬಸವಣ್ಣನವರ ಸಮಾನತೆಯ ತತ್ವ, ಸೂಫಿ ಸಂತರ ಸಾಮರಸ್ಯದ ಸಂದೇಶ ಮತ್ತು ಸಮಗ್ರ ಅಭಿವೃದ್ಧಿಯ ಸಂಕಲ್ಪವನ್ನು ಒಗ್ಗೂಡಿಸಿಕೊಂಡ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಪರ್ವಕ್ಕೆ ಹೊಸ ವೇಗ ನೀಡುವ ಮಹತ್ವದ ಮೈಲಿಗಲ್ಲಾಗಲಿ ಎನ್ನುವ ನಿರೀಕ್ಷೆ ನನ್ನದಾಗಿದೆ. ಸಾಮಾಜಿಕ ಸಾಮರಸ್ಯ, ಜನ ಸೌಹಾರ್ದ ಇಲ್ಲದೆ ಯಾವುದೇ ಪ್ರದೇಶದ ಅಭಿವೃದ್ಧಿ, ಪ್ರಗತಿ ಸಾಧ್ಯವಿಲ್ಲ ಎನ್ನುವುದನ್ನು ನಾನು ನನ್ನ ಇಷ್ಟು ವರ್ಷಗಳ ರಾಜಕೀಯ ಅನುಭವದಿಂದ ಕಲಿತಿದ್ದೇನೆ. ಏಕೆಂದರೆ ಅಭಿವೃದ್ಧಿ ಎನ್ನುವುದು ಸರ್ವರನ್ನೂ ಒಳಗೊಳ್ಳುವ ಪ್ರಕ್ರಿಯೆಯಾಗಿದೆ ಎಂದರು.

ಜೊತೆಗೆ, ನಾನು ಮೊದಲ ಬಾರಿಗೆ ಈ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಹೊತ್ತಲ್ಲೇ ಪಕ್ಷದ ಕಚೇರಿಗೂ ಭೇಟಿ ನೀಡಿ ಕಾರ್ಯಕರ್ತರನ್ನು ಮಾತಾಡಿಸುತ್ತಿದ್ದೇನೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಶ್ವದ ಮೊದಲ ಪ್ರಜಾಪ್ರಭುತ್ವದ ಮಾದರಿ ವಚನಕಾರರ  ಅನುಭವ ಮಂಟಪದ ನೆಲೆಗೆ ಭೇಟಿ ನೀಡಬೇಕು ಎನ್ನುವುದು ನನ್ನ ಕಾರ್ಯಕರ್ತ ಸಮೂಹದ ಇಚ್ಛೆಯೂ ಆಗಿತ್ತು.

ಪಕ್ಷದ ಕಾರ್ಯಕರ್ತರೇ ಪಕ್ಷವನ್ನು ಸೈದ್ಧಾಂತಿಕವಾಗಿ ಕಟ್ಟಿ ನಿಲ್ಲಿಸುವ ಸಮರ ಸೇನಾನಿಗಳು. ಪಕ್ಷದ ರಥವನ್ನು ಅಧಿಕಾರಕ್ಕೆ ಕರೆದೊಯ್ಯುವ ಹೆದ್ದಾರಿಗಳು ಎನ್ನುವುದನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ನುಡಿದರು.

Key words: CM, DK Shivakumar, first, North Karnataka, tour

The post ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ ಉ.ಕರ್ನಾಟಕ ಪ್ರವಾಸ ಆರಂಭ ಖುಷಿ ಕೊಟ್ಟಿದೆ- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಜಗಳ ಬಿಡಿಸಲು ಬಂದವರ ಮೇಲೆಯೇ ಅಟ್ಯಾಕ್

ಮೈಸೂರು,ಜುಲೈ,6,2026 (www.justkannada.in): ಕುಡಿದು ಆಟೋದಲ್ಲಿ ಬಂದಿದ್ದ ಮೂವರು ಕ್ಯಾಂಟರ್ ಗೆ...

രാമക്ഷേത്ര ഫണ്ട് തട്ടിപ്പ്: ചമ്പത്ത് റായുടെയും അനില്‍ മിശ്രയുടെയും രാജി സ്വീകരിച്ചു

ലഖ്‌നൗ: രാമക്ഷേത്ര ഫണ്ട് തട്ടിപ്പില്‍ ആരോപണ വിധേയരായ ചമ്പത്ത് റായുടെയും അനില്‍...

போட்டோ ஷூட் என வரவழைத்து கொலை; தண்டவாளத்தில் சடலம் வீச்சு; விசாரணையில் வெளியான காதல் பின்னணி

கோவை மாவட்டம் தடாகம் அடுத்த மடத்தூர் பகுதியைச் சேர்ந்தவர் பிரவீன் (24)....

Minister Satyakumar: అమరావతిపై జగన్‌కు మంత్రి సత్యకుమార్ సవాల్.. ఎన్నికలకు వెళ్దామా..?

Minister Satyakumar: వైఎస్‌ఆర్‌ కాంగ్రెస్‌ పార్టీ అధినేత, మాజీ ముఖ్యమంత్రి వైఎస్...