ಬೆಂಗಳೂರು,ಜೂನ್,27,2026 (www.justkannada.in): ಗ್ಯಾರಂಟಿಗಳ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಆರೋಗ್ಯ ಇಲಾಖೆಯನ್ನೇ ಐಸಿಯು ಅಲ್ಲಿ ಇರಿಸುವ ಪರಿಸ್ಥಿತಿ ತಂದಿರುವುದೇ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಸರ್ಕಾರ ಬದಲಾದರೂ..ಆರೋಗ್ಯ ಸಚಿವರು ಬದಲಾದರೂ… ಆರೋಗ್ಯ ಇಲಾಖೆಯ ಹಣೆಬರಹ ಮಾತ್ರ ಬದಲಾಗಲಿಲ್ಲ! ಮುಖ್ಯಮಂತ್ರಿ ಬದಲಾದರು. ಆರೋಗ್ಯ ಸಚಿವರು ಬದಲಾದರು. ಆದರೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಮರ್ಥತೆ ಮತ್ತು ಜನವಿರೋಧಿ ಆಡಳಿತ ಮಾತ್ರ ಬದಲಾಗಲಿಲ್ಲ! ಇಂದು ರಾಜ್ಯದ ಆರೋಗ್ಯ ಇಲಾಖೆಯೇ ಐಸಿಯುನಲ್ಲಿದೆ ಎಂದು ಕಿಡಿಕಾರಿದ್ದಾರೆ.
35,196 ಹುದ್ದೆಗಳು ಖಾಲಿ!
ಜೀವ ಉಳಿಸಬೇಕಾದ ಇಲಾಖೆಯಲ್ಲೇ ಬರೋಬ್ಬರಿ 35,196 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳು ಕೇವಲ ಹೆಸರಿಗಷ್ಟೇ ಉಳಿದಿದ್ದು, ಸಮಸ್ಯೆಗಳ ಆಗರಗಳಾಗಿವೆ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ನೋಡಿಕೊಳ್ಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಪ್ಯಾರಾಸಿಟಮಾಲ್ ಮಾತ್ರೆಗಳೂ ಸಿಗದೆ ಬಡ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಮ್ಮ ಕ್ಲಿನಿಕ್’ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನವೇ ಇಲ್ಲ!
ಬಡವರು ಹಾಗೂ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಆರಂಭವಾಗಿದ್ದ ‘ನಮ್ಮ ಕ್ಲಿನಿಕ್’ ಯೋಜನೆಗೂ ಕಾಂಗ್ರೆಸ್ ಸರ್ಕಾರ ಗರ ಬಡಿದಿದೆ. ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನವನ್ನೇ ನೀಡಿಲ್ಲ! ದುಡಿಯುವ ಕೈಗಳಿಗೆ ಸಂಬಳ ಕೊಡಲೂ ಸಾಧ್ಯವಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಾದರೂ ಇದೆಯೇ?
ಗ್ಯಾರಂಟಿಗಳ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಆರೋಗ್ಯ ಇಲಾಖೆಯನ್ನೇ ಐಸಿಯು ಅಲ್ಲಿ ಇರಿಸುವ ಪರಿಸ್ಥಿತಿ ತಂದಿರುವುದೇ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ! ಎಂದು ಅಶೋಕ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ತಕ್ಷಣವೇ 35,196 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ. ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಿ. ಇಲ್ಲದಿದ್ದರೆ ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
Key words: Health Department, ICU, R. Ashok, criticizes
The post 35,196 ಹುದ್ದೆಗಳು ಖಾಲಿ, ಸಿಬ್ಬಂದಿಗೆ ವೇತನವಿಲ್ಲ: ಐಸಿಯುನಲ್ಲಿ ಆರೋಗ್ಯ ಇಲಾಖೆ- ಆರ್.ಅಶೋಕ್ ಟೀಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





