ಬೆಂಗಳೂರು,ಮೇ,2.2026 (www.justkannada.in): ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯನೆಂದು ಹೇಳಿಕೊಂಡಿರುವ ಹನಿಯೂರು ಚಂದ್ರೇಗೌಡ ಎಂಬುವವರನ್ನು ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಹನಿಯೂರು ಚಂದ್ರೇಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೊ ಹಾಗೂ ಫೋಟೊಗಳನ್ನು ಚಂದ್ರೇಗೌಡ ತೆಗೆದುಕೊಳ್ಳುತ್ತಿದ್ದರು. ಬಳಿಕ ಆ ಫೋಟೊ ವಿಡಿಯೊಗಳನ್ನು ಇಟ್ಟುಕೊಂಡು ಪೀಡಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.
ಚಂದ್ರೇಗೌಡ ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದ, ಅಲ್ಲದೇ ಪತ್ರಕರ್ತ, ಉಪನ್ಯಾಸಕ, ಜಾನಪದ, ಬುಡಕಟ್ಟು ಸಂಶೋಧಕನಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದಾಗಿ ಬಿಂಬಿಸಿಕೊಂಡಿದ್ದರು. ನಕಲಿ ಗುರುತಿನ ಚೀಟಿ ಮಾಡಿಕೊಂಡು ಹಲವರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
‘ಪತಿಯ ನಡುವೆ ವೈಮನಸ್ಸು ಉಂಟಾಗಿ ದೂರುದಾರೆ ಪ್ರತ್ಯೇಕವಾಗಿ ನೆಲಸಿದ್ದರು. ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಮದುವೆ ಸಮಾರಂಭ, ಚಿತ್ರೀಕರಣಕ್ಕೆ ಹೋಗಿ ಮೇಕಪ್ ಕೆಲಸ ಮಾಡುತ್ತಿದ್ದರು. 2021ರಲ್ಲಿ ಚಂದ್ರೇಗೌಡರ ಪರಿಚಯವಾಗಿತ್ತು. ಧಾರಾವಾಹಿಗಳಲ್ಲಿ ನಟಿಸಿದ್ದೇನೆ; ಶಾರದಾ ಲೇಔಟ್ನಲ್ಲಿ ನೆಲಸಿದ್ದೇನೆ ಎಂಬುದಾಗಿ ಆರೋಪಿಯು ಮಹಿಳೆಯನ್ನು ಪರಿಚಯಿಸಿಕೊಂಡಿದ್ದರು. ಮೊಬೈಲ್ ಸಂಖ್ಯೆ ಪಡೆದುಕೊಂಡು ಮೇಕಪ್ ಸಂಬಂಧಿಸಿದ ಕೆಲಸಗಳಿದ್ದರೆ ಕರೆ ಮಾಡುವುದಾಗಿ ಆರೋಪಿ ಹೇಳಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹನಿಯೂರು ಚಂದ್ರೇಗೌಡ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪತ್ನಿಯಿಂದ ವಿಚ್ಛೇದನ ಪಡೆದುಕೊಂಡು ನಿಮ್ಮನ್ನೇ ಮದುವೆ ಆಗುತ್ತೇನೆಂದು ನಂಬಿಸಿ ದೂರುದಾರೆಯ ಜತೆಗೆ ಲೈಂಗಿಕ ಸಂಪರ್ಕ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಖಾಸಗಿ ಕ್ಷಣವನ್ನು ವಿಡಿಯೊ ಮಾಡಿಕೊಂಡಿದ್ದ ಆರೋಪಿ ಚಂದ್ರೇಗೌಡ, ಆ ವಿಡಿಯೊ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದರು. ನಾನು ಹೇಳಿದಂತೆ ಕೇಳಬೇಕೆಂದು ಹೇಳಿ ಹಂತಹಂತವಾಗಿ 5 ಲಕ್ಷ ರೂ. ಪಡೆದುಕೊಂಡಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದು ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
Key words: Sexual assault, Haniyur Chandregowda ,arrested
The post ಲೈಂಗಿಕ ದೌರ್ಜನ್ಯ ಆರೋಪ: ಹನಿಯೂರು ಚಂದ್ರೇಗೌಡ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





