ಮೈಸೂರು, ಮೇ.,07,2026 (www.justkannada.in): ಸೀಳು ತುಟಿ (Cleft Lip) ಮತ್ತು ಸೀಳು ಅಂಗುಳ (Cleft Palate) ಸಮಸ್ಯೆ ಹೊಂದಿರುವ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಸಮಗ್ರವಾದ ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಭಾರತೀಯ ಕ್ಲಫ್ಟ್ ತುಟಿ ಅಂಗುಳ ಮತ್ತು ಕ್ರೇನಿಯೊಫೇಶಿಯಲ್ ಅನೋಮಲಿಗಳ ಸಂಘದ (ISCLPCA) ವತಿಯಿಂದ ಇಂಡೋಕ್ಲೆಫ್ಟ್ಕಾನ್ 2026 ರ 24 ನೇ ವಾರ್ಷಿಕ ಸಮ್ಮೇಳನವನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನೈಮಿಷಂ ಕ್ಯಾಂಪಸ್ ನ ನಾಲೆಡ್ಜ್ ಪಾರ್ಕ್ ನಲ್ಲಿ ಉದ್ಘಾಟಿಸಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿದರು.
ಅರಿವಿನ ಕೊರತೆ ಮತ್ತು ಸಮಯೋಚಿತ ಚಿಕಿತ್ಸೆ ನೀಡದೆ ಇರುವುದರಿಂದ ಸೀಳು ತುಟಿ ಮತ್ತು ಸೀಳು ಅಂಗುಳ ಸಮಸ್ಯೆ ಜನನದಿಂದಲೇ ಬರುವಂತದ್ದಾಗಿದೆ. ಆದರೆ ಸರಿಯಾದ ಸಮಯದಲ್ಲಿ ತಜ್ಞರ ಸಲಹೆ ಮತ್ತು ಸಮಸ್ಯೆಯ ಗುರುತಿಸುವಿಕೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಇಂತಹ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ, ಅವರಿಗೆ ಎಲ್ಲಿ ಮತ್ತು ಹೇಗೆ ಚಿಕಿತ್ಸೆ ಪಡೆಯಬೇಕೆಂದು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಸಮಗ್ರ ಚಿಕಿತ್ಸಾ ವಿಧಾನ (Multidisciplinary Approach) ಈ ಸಮಸ್ಯೆಯ ಚಿಕಿತ್ಸೆಯು ಕೇವಲ ಒಂದು ಬಾರಿಯ ಶಸ್ತ್ರ ಚಿಕಿತ್ಸೆಯಿಂದ ಸಾಧ್ಯವಿಲ್ಲ ಇದಕ್ಕೆ ಹಲವು ತಜ್ಞರ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.
ನುರಿತ ಶಸ್ತ್ರಚಿಕಿತ್ಸಕರು (Surgeons) ಆರ್ಥೋಡಾಂಟಿಸ್ಟ್ ಗಳು (Orthodontists) ಸರ್ಜನ್ ಗಳು, ವಾಕ್ ಚಿಕಿತ್ಸಕರು (Speech Therapists) ಇವರೆಲ್ಲರೂ ಒಗ್ಗೂಡಿ ಚಿಕಿತ್ಸೆ ನೀಡಿದಾಗ ಮಾತ್ರ ಮಗುವಿನ ಬೆಳವಣಿಗೆ ಸರಿಯಾಗಿ ಆಗಲು ಸಾಧ್ಯ. ಸರ್ಕಾರದ ಸಹಕಾರ ಮತ್ತು ಕಳೆದ 20 ವರ್ಷಗಳಿಂದ ಸ್ಮೈಲ್ ಟ್ರೈನ್ (Smile Train) ಸಂಸ್ಥೆಯು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಈವರೆಗೆ ಸಂಸ್ಥೆಯು 7 ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಾಮಾನ್ಯ ಸಾಧನೆಯಲ್ಲ ಎಂದು ಹೇಳಿದರು.
ಬಡ ಜನರಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನoತಹ ದೊಡ್ಡ ನಗರಗಳಿಗೆ ಬರಲು ಸಮಯ ಪ್ರಯಾಣ ಮತ್ತು ಇತರ ವೆಚ್ಚಗಳ ಸಮಸ್ಯೆ ಇರುತ್ತದೆ. ಇದನ್ನು ಸರಿದೂಗಿಸಲು ಮತ್ತು ಅತ್ಯುತ್ತಮ ಚಿಕಿತ್ಸೆ ನೀಡಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಮ್ಮೇಳನದ ಘೋಷ ವಾಕ್ಯವಾದ ಸಂಪರ್ಕಿಸಿ, ಸಂವಹನ ನಡೆಸಿ, ಮತ್ತು ಸಹಕರಿಸಿ (Connect, Communicate and Collaborate) ಎಂಬುದು ಅತ್ಯಂತ ಸೂಕ್ತವಾಗಿದೆ. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಇಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿವಾರಿಸಲು ಸಾಧ್ಯ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳು ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಹೊಸ ಸಾಮಗ್ರಿಗಳನ್ನು ಬಳಸಿಕೊಳ್ಳುವ ಮೂಲಕ ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ದಕ್ಷಿಣ ಏಷ್ಯಾದ ಸ್ಮೈಲ್ ಟ್ರೈನ್ ನ ಪ್ರಾದೇಶಿಕ ನಿರ್ದೇಶಕರಾದ ರೇಣು ಮೆಹ್ತಾ ಅವರು ಮಾತನಾಡಿ, ಸೀಳು ತುಟಿ ಮತ್ತು ಸೀಳು ಅಂಗುಳಿನ (cleft lip and palate) ಸಮಸ್ಯೆಯೊಂದಿಗೆ ಜನಿಸಿದ ಪ್ರತಿಯೊಂದು ಮಗುವಿನ ಬಗ್ಗೆ ಸ್ಮೈಲ್ ಟ್ರೈನ್ ಸ್ಥಳೀಯವಾಗಿ ಕಾಳಜಿ ವಹಿಸುತ್ತದೆ ಎಂದು ಹೇಳಿದರು.
1999 ರಿಂದ ಜಾಗತಿಕವಾಗಿ 20 ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ ಸ್ಮೈಲ್ ಟ್ರೈನ್ ಸಂಸ್ಥೆಯು ಬೆಂಬಲ ನೀಡುತ್ತಿದೆ. ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ 7,50,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಸ್ಮೈಲ್ ಟ್ರೈನ್ ಸ್ಥಳೀಯ ಆಸ್ಪತ್ರೆಗಳು, ವೈದ್ಯರು ಮತ್ತು ಶಸ್ತ್ರಚಿಕಿತ್ಸಕರೊಂದಿಗೆ ಕೆಲಸ ಮಾಡುತ್ತದೆ, ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಎಲ್ಲರಿಗೂ ತಲುಪಿಸಲು ಭಾರತದ 13 ರಾಜ್ಯಗಳೊಂದಿಗೆ ಅಧಿಕೃತ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು.
ತರಬೇತಿ ಮಾರ್ಗದರ್ಶನ ಮತ್ತು ನಿರಂತರ ಶಿಕ್ಷಣದ ಮೂಲಕ ಪರಿಣತಿಯನ್ನು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತಗೊಳಿಸದೆ, ಸಂಪೂರ್ಣ ಜಾಲಕ್ಕೆ ಹಂಚುವುದು ನಮ್ಮ ಗುರಿಯಾಗಿದೆ. ಇತ್ತೀಚೆಗೆ ನಡೆದ ಕಾರ್ಯಾಗಾರದಲ್ಲಿ 30 ಯುವ ಶಸ್ತ್ರಚಿಕಿತ್ಸಕರಿಗೆ ಅಲ್ವಿಯೋಲರ್ ಬೋನ್ ಗ್ರಾಫ್ಟ್ (alveolar bone graft) ಶಸ್ತ್ರಚಿಕಿತ್ಸೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಇಂಡೋಕ್ಲೆಫ್ಟ್ಕಾನ್ (Indocleftcon) 2026 ಅನ್ನು ಕೇವಲ ವೈಜ್ಞಾನಿಕ ಸಮ್ಮೇಳನವಾಗಿ ನೋಡದೆ ಹೊಸತನವನ್ನು ಅನ್ವೇಷಿಸಲು ಮತ್ತು ಉದಾರವಾಗಿ ಶಿಕ್ಷಣ ನೀಡಲು ಇರುವ ಹಂಚಿಕೆಯ ಜವಾಬ್ದಾರಿ ಎಂದು ಹೇಳಿದರು. ಸರ್ಕಾರದ ಬೆಂಬಲದೊoದಿಗೆ ಭಾರತದ ಕಟ್ಟ ಕಡೆಯ ಸಮುದಾಯಗಳಿಗೂ ಸಮಗ್ರ ಚಿಕಿತ್ಸೆಯನ್ನು ವಿಸ್ತರಿಸುವ ಭರವಸೆಯನ್ನು ನೀಡುತ್ತೇವೆ ಎಂದು ಹೇಳಿದರು.
ISCLPCA ನ ಕಾರ್ಯದರ್ಶಿಯಾದ ಡಾ. ಪ್ರೀತಮ್ ಶೆಟ್ಟಿ ಅವರು ಮಾತನಾಡಿ ತಮ್ಮ ಸಂಘವು ಒಂದು ಉತ್ತಮ (multi-disciplinary) ತಂಡವಾಗಿದ್ದು, ಇದರಲ್ಲಿ ಶಸ್ತ್ರಚಿಕಿತ್ಸಕರು, ಸ್ಪೀಚ್ ಪ್ಯಾಥೋಲಜಿಸ್ಟ್ಗಳು, ಆರ್ಥೊಡಾಂಟಿಸ್ಟ್ಗಳು, ಪೀಡಿಯಾಟ್ರಿಶಿಯನ್ಸ್, ಅರಿವಳಿಕೆ ತಜ್ಞರು ಮತ್ತು ನ್ಯೂರೋ ಸರ್ಜನ್ ಗಳನ್ನು ಹೊಂದಿದೆ ಎಂದು ಹೇಳಿದರು.
ಈ ಸಂಘವು 25 ವರ್ಷಗಳ ಹಿಂದೆ 5 ಮಂದಿ ಸಂಸ್ಥಾಪಕ ಸದಸ್ಯರೊಂದಿಗೆ ಪ್ರಾರಂಭವಾಯಿತು. ಇಂದು ಇದು 650 ವೃತ್ತಿಪರರನ್ನು ಹೊಂದಿರುವ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ಪ್ರತಿ ವರ್ಷ ವಾರ್ಷಿಕ ಸಭೆಗಳನ್ನು ನಡೆಸುವ ಮೂಲಕ ಜ್ಞಾನವನ್ನು ಹಂಚಿಕೊಳ್ಳಲಾಗುತ್ತದೆ ಮತ್ತು ಸೀಳು ತುಟಿ ಹಾಗೂ ಅಂಗುಳಿನ ಸಮಸ್ಯೆಯೊಂದಿಗೆ ಜನಿಸಿದ ಮಕ್ಕಳಿಗೆ ಸಮಗ್ರ ಆರೈಕೆ ನೀಡುವತ್ತ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಸದಸ್ಯರಿಗಾಗಿ ಫೆಲೋಶಿಪ್ ಮತ್ತು ಅಬ್ಸರ್ವರ್ಶಿಪ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೆ ವರ್ಷಕ್ಕೆ ಎರಡು ಬಾರಿ ಪ್ರಕಟವಾಗುವ ಉನ್ನತ ಗುಣಮಟ್ಟದ ಜರ್ನಲ್ ಅನ್ನು ಸಂಘವು ಹೊಂದಿದೆ. 25ನೇ ವರ್ಷದ ಅಂಗವಾಗಿ, ಸುಮಾರು ₹25 ಲಕ್ಷ ವೆಚ್ಚದಲ್ಲಿ ಸೀಳು ತುಟಿ ಮತ್ತು ಅಂಗುಳಿನ ಚಿಕಿತ್ಸೆಗೆ ಸಂಬoಧಿಸಿದoತೆ ಒಂದು ಓಪನ್ ಆಕ್ಸೆಸ್ ಪಠ್ಯಪುಸ್ತಕವನ್ನು ಹೊರತರಲಾಗುತ್ತಿದೆ ಎಂದು ಹೇಳಿದರು.
ಈ ಪುಸ್ತಕಕ್ಕೆ ಭಾರತದ ಮತ್ತು ವಿದೇಶದ ಪರಿಣಿತರು ಕೊಡುಗೆ ನೀಡುತ್ತಿದ್ದಾರೆ, ಇದನ್ನು ಸ್ಪ್ರಿಂಗರ್ (Springer) ಸಂಸ್ಥೆಯು ಪ್ರಕಟಿಸಲಿದ್ದು, ಇದು ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಘದ ಹೆಸರನ್ನು ಗುರುತಿಸುವಂತೆ ಮಾಡುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ISCLPCA ನ ಅಧ್ಯಕ್ಷರಾದ ಡಾ. ಎಂ. ಪುಷ್ಪಾವತಿ ಅವರು ಮತ್ತು ಮತ್ತಿತರರು ಉಪಸ್ಥಿತರಿದ್ದರು.
Key words: Cleft lip, cleft palate, problem, treatment, Minister, Dinesh Gundu Rao
The post ಸೀಳು ತುಟಿ ಮತ್ತು ಸೀಳು ಅಂಗುಳ ಸಮಸ್ಯೆ: ಸಮಗ್ರ ಚಿಕಿತ್ಸೆಯ ಅತ್ಯಗತ್ಯ-ಸಚಿವ ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





