19
March, 2025

A News 365Times Venture

19
Wednesday
March, 2025

A News 365Times Venture

ಕುಲಪತಿಗಳ ನೇಮಕಾತಿ:  ರಾಜ್ಯ ಸರ್ಕಾರದ ಪಾತ್ರ ರದ್ದು:ಯುಜಿಸಿ ನಿಯಮಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ

Date:

ಬೆಂಗಳೂರು,ಫೆಬ್ರವರಿ,6,2025 (www.justkannada.in): 2025ರ ಕರಡು ಯುಜಿಸಿ ನಿಯಮಗಳಲ್ಲಿ ಶಿಕ್ಷಣ ಸಮಕಾಲೀನ ಪಟ್ಟಿಯಲ್ಲಿ ವಿಷಯವಾಗಿದ್ದರೂ ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ಪಾತ್ರವನ್ನು ರದ್ದುಪಡಿಸಲಾಗಿದ್ದು, ಪ್ರಜಾಸತ್ತಾತ್ಮಕವಲ್ಲದ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಯುಜಿಸಿ ಸ್ವಭಾವದ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆ ಹಾಗೂ ಅಧಿಕಾರದ ಮೇಲೆ ಯುಜಿಸಿ ನಿಯಮಗಳ ಸ್ವರೂಪ ಮತ್ತು ಪರಿಣಾಮಗಳ ಕುರಿತು ಚರ್ಚಿಸಲು ರಾಜ್ಯಗಳು ಮುಂದಾಗಿರುವುದು ಸಮಾವೇಶದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.  ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಸಮಾವೇಶವು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ನಾನು ಭಾವಿಸಿದ್ದೇನೆ.  ಯಾವುದೇ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಗೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜದ ಮೂಲ ಸ್ತಂಭವಾಗಿರುವ ಉನ್ನತ ಶಿಕ್ಷಣ, ಆರ್ಥಿಕ ಬೆಳವಣಿಗೆ, ಸ್ಪರ್ಧೆ ಮತ್ತು ಜ್ಞಾನವನ್ನು ವೃದ್ಧಿಸುತ್ತದೆ. ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಕೆಲಸಕ್ಕೆ ಯೋಗ್ಯವಾಗಿರುವ ಹಾಗೂ ಇಂದಿನ ಬದಲಾಗುತ್ತಿರುವ ಸಮಾಜದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿರುವ ಪದವೀಧರರನ್ನು ರೂಪಿಸಲು ಅವಶ್ಯಕವಾಗಿವೆ. ವಿಮರ್ಶಾತ್ಮಕ ಯೋಚನಾ ಕೌಶಲ್ಯವನ್ನು ಬೆಳೆಸಲು ಹಾಗೂ ತಮ್ಮ ಕ್ಷೇತ್ರದ ತಜ್ಞರಿಂದ ಕಲಿತುಕೊಳ್ಳಲು ಇವು ಅವಕಾಶ ಕಲ್ಪಿಸುತ್ತವೆ.

ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕ ಪ್ರಮುಖ ಪಾತ್ರವನ್ನು ವಹಿಸಿದೆ. ಕಳೆದ 20 ವರ್ಷಗಳಲ್ಲಿ 76 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು (ಸರ್ಕಾರಿ, ಖಾಸಗಿ ಮತ್ತು ಡೀಮ್ಡ್-ಟು-ಬಿ) ವಿವಿಧ ಅಧ್ಯಯನ ವಿಭಾಗಗಳಲ್ಲಿ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಪದವಿಗಳನ್ನು 4,400 ಕಾಲೇಜುಗಳು ಒದಗಿಸುತ್ತವೆ. ಉನ್ನತ ಶಿಕ್ಷಣದ ಪರಿಸರದ ವ್ಯವಸ್ಥೆಯನ್ನು ವಿಸ್ತರಿಸಿ ಹಾಗೂ ಅಭಿವೃದ್ಧಿಗೊಳಿಸಿ ಸಮಾಜದ ಎಲ್ಲಾ ವರ್ಗಗಳಿಗೂ ಉನ್ನತ ಶಿಕ್ಷಣಕ್ಕೆ ಪ್ರಜಾಸತ್ತಾತ್ಮಕ ಪ್ರವೇಶವನ್ನು ದೊರಕಿಸಲು  ಕರ್ನಾಟಕ ಸರ್ಕಾರ ಬದ್ಧವಾಗಿದೆ. ಕರ್ನಾಟಕ ರಾಜ್ಯವು ಉನ್ನತ ಶಿಕ್ಷಣದಲ್ಲಿ ಶೇಕಡಾ 36.20 ರಷ್ಟು ಜಿಇಆರ್ ಹೊಂದಿದ್ದು, ಶೇ 28.40 ರಷ್ಟಿರುವ  ರಾಷ್ಟ್ರದ ಜಿಇಆರ್ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿದೆ. ತನ್ಮೂಲಕ, ಹಲವಾರು ಸವಾಲುಗಳ ನಡುವೆಯೂ ಕರ್ನಾಟಕ ಒಳಗೊಳ್ಳುವ ಹಾಗೂ ಉನ್ನತ ಗುಣಮಟ್ಟದ ಶಿಕ್ಷಣ ಪಥದತ್ತ ಕರ್ನಾಟಕ ಹೆಜ್ಜೆಯಿಟ್ಟಿದೆ.

ಕರಡು ಯುಜಿಸಿ ನಿಯಮಗಳು, 2025 ಕುರಿತು ಕುಲಪತಿಗಳ ನೇಮಕಾತಿ: ವಿಶ್ವವಿದ್ಯಾಲಯಗಳ ಕುಲಪತಿಗಳು ಶಿಕ್ಷಣ ಮತ್ತು ಆಡಳಿತಾತ್ಮಕ ನಾಯಕರಾಗಿದ್ದು ವಿಶ್ವವಿದ್ಯಾಲಯದ ಆಗುಹೋಗುಗಳ ಜವಾಬ್ದಾರಿ ಅವರ ಮೇಲಿರುತ್ತದೆ. ಎಲ್ಲಾ ಹಂತಗಳಲ್ಲಿ ಪಾರದರ್ಶಕವಾಗಿ ಹಾಗೂ ತನ್ನ ಗುರುತನ್ನು ಎತ್ತಿಹಿಡಿಯುತ್ತಾರೆ.

ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಜವಾಬ್ದಾರಿ ಹಾಗೂ ಉತ್ತರದಾಯಿತ್ವವಿರುತ್ತದೆ.  ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಬಗ್ಗೆ ಸರ್ಕಾರಿಯಾ ಆಯೋಗವು (1983-88) ಮಾಡಿರುವ ಕೆಲವು ಅಂಶಗಳೆಂದರೆ, ಕುಲಪತಿಗಳಾಗಿ ರಾಜ್ಯಪಾಲರ ಪಾತ್ರವು ಶಾಸನಬದ್ಧವಲ್ಲ, ಸಾಂವಿಧಾನಕವಲ್ಲ ಮತ್ತು ರಾಜ್ಯ ಕಾನೂನುಗಳ ಪ್ರಕಾರ ವ್ಯಾಖ್ಯಾನ ಮಾಡಬೇಕು ಎಂದು ತಿಳಿಸಿರುವುದು ಗಮನಾರ್ಹ.

ವಿಶ್ವವಿದ್ಯಾಲಯದ ವಿಷಯಗಳಲ್ಲಿ ರಾಜ್ಯಪಾಲರು ಸ್ವತಂತ್ರ ತೀರ್ಪನ್ನು ಉಳಿಸಿಕೊಳ್ಳುತ್ತಲೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಬೇಕೆಂದು ಶಿಫಾರಸ್ಸು ಮಾಡಿದೆ. ಸಂವಿಧಾನದ ಕಾರ್ಯಶೀಲತೆಯನ್ನು ಪರಿಶೀಲಿಸಲು (2000-02)  ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರ ನೇತೃತ್ವದ ರಾಷ್ಟ್ರೀಯ ಆಯೋಗವು ಕೂಡ ರಾಜಕೀಯ ತಟಸ್ಥತೆಯನ್ನು ಶಿಫಾರಸ್ಸು ಮಾಡಿದೆಯಲ್ಲದೆ, ಕುಲಪತಿಗಳ ಕಾರ್ಯಗಳ ಬಗ್ಗೆ ಸ್ಪಷ್ಟ ವ್ಯಾಖ್ಯಾನವನ್ನು ನೀಡಿದೆ. ಅಧಿಕಾರಯುತ ಪಾತ್ರಕ್ಕಿಂತ ನೆರವು ನೀಡುವ ಹಾಗೂ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಹೆಚ್ಚಿಸುವುದನ್ನು ಶಿಫಾರಸ್ಸು ಮಾಡಲಾಗಿದೆ.

ಕೇಂದ್ರ  ಮತ್ತು ರಾಜ್ಯಗಳ ಸಂಬಂಧದ ಬಗ್ಗೆ ಎಂ.ಎಂ. ಪುಂಚಿ ಆಯೋಗವು (2007-10) ರಾಜ್ಯಪಾಲರ ಕಚೇರಿಯ ಘನತೆಯನ್ನು ಕಾಪಾಡಲು ರಾಜ್ಯಪಾಲರು ಸಾಂವಿಧಾನಾತ್ಮಕ ಹೊಣೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ರಾಜ್ಯ ಸರ್ಕಾರವು ಯುಜಿಸಿ ನಿಯಮಗಳು-2025 ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ. ಉದ್ಯಮ ರಂಗ ಪರಿಣಿತರು, ನೀತಿ ನಿರೂಪಣೆಯಲ್ಲಿ  ಕೆಲಸ  ಮಾಡಿದವರು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳು (ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅರ್ಹತೆ ಇಲ್ಲದಿದ್ದರೂ,  ಶೈಕ್ಷಣಿಕ ಆಡಳಿತದೊಂದಿಗೆ ಉನ್ನತ ಶಿಕ್ಷಣ ಮಟ್ಟದಲ್ಲಿ ಸಾಕಷ್ಟು ವರ್ಷಗಳ ಅನುಭವವುಳ್ಳವರನ್ನು) ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ನೇಮಕ ಮಾಡಲು ಯುಜಿಸಿ ಅವಕಾಶ ಕಲ್ಪಿಸಿದೆ.  ಈ ಅವಕಾಶವನ್ನು ಗಂಭೀರವಾಗಿ ಮರುಪರಿಶೀಲಿಸಬೇಕಾದ ಅಗತ್ಯವಿದೆ.

ಕುಲಪತಿಗಳ ನೇಮಕಾತಿಗಾಗಿ ಹುಡುಕಾಟ ಮತ್ತು ಆಯ್ಕೆ ಸಮಿತಿಯ ರಚನೆ ಹಾಗೂ ಸಂಯೋಜನೆ:

ಪ್ರಾರಂಭದಿಂದಲೂ, ಹುಡುಕಾಟ ಮತ್ತು ಆಯ್ಕೆ ಸಮಿತಿಗಳನ್ನು ರಾಜ್ಯ ಸರ್ಕಾರ, ಯುಜಿಸಿ, ಕುಲಪತಿ ಮತ್ತು ಸಂಬಂಧಪಟ್ಟ ವಿಶ್ವವಿದ್ಯಾಲಯದ ವತಿಯಿಂದ  ನಾಮನಿರ್ದೇಶಿತಗೊಂಡ  ಹೆಸರುಗಳನ್ನು  ಕುಲಪತಿಗಳ ಆಯ್ಕೆಗಾಗಿ ಶಿಫಾರಸ್ಸು ಮಾಡಲಾಗುತಿತ್ತು. ಆದರೆ 2025ರ ಕರಡು ಯುಜಿಸಿ ನಿಯಮಗಳಲ್ಲಿ ಶಿಕ್ಷಣ ಸಮಕಾಲೀನ ಪಟ್ಟಿಯಲ್ಲಿ ವಿಷಯವಾಗಿದ್ದರೂ ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ಪಾತ್ರವನ್ನು ರದ್ದುಪಡಿಸಲಾಗಿದೆ.

ಈ ಬಗ್ಗೆ ನಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಇಚ್ಚಿಸುತ್ತಾ ಈ ವಿಷಯದ ಬಗ್ಗೆ  ಪ್ರಜಾಸತ್ತಾತ್ಮಕವಲ್ಲದ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಯುಜಿಸಿ ಸ್ವಭಾವದ ವಿರುದ್ಧ ಪ್ರತಿಭಟಿಸುತ್ತೇವೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಆರ್ಥಿಕ ಮತ್ತಿತರ ನೆರವು ನೀಡುವುದರಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣದ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ.

ಹುಡುಕಾಟ ಮತ್ತು ಆಯ್ಕೆ ಸಮಿತಿಗಳಲ್ಲಿ ರಾಜ್ಯ ಸರ್ಕಾರದ ನಾಮನಿರ್ದೇಶಿತ ವ್ಯಕ್ತಿಗಳನ್ನು ಒಳಗೊಳ್ಳದಿರುವುದು ಭಾರತದ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ವಿಶ್ವವಿದ್ಯಾಲಯಗಳನ್ನು ನಡೆಸಲು ಬಹುತೇಕ ಅನುದಾನವನ್ನು ನೀಡುವ ರಾಜ್ಯ ಸರ್ಕಾರಗಳನ್ನು ವಿಶ್ವವಿದ್ಯಾಲಯದ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಗಿಡುವ ಯುಜಿಸಿ ಪ್ರಯತ್ನವನ್ನು ಒಪ್ಪಿಕೊಳ್ಳುವುದು ಅಸಾಧ್ಯ.

ಕೇಂದ್ರ ಸರ್ಕಾರದಿಂದ ನೇಮಕವಾಗುವ ರಾಜ್ಯಪಾಲರ ಮೂಲಕ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಪ್ರಜಾಸತ್ತಾತ್ಮಕವಾದುದಲ್ಲ. ಆದ್ದರಿಂದ, ಕುಲಪತಿಗಳ ಆಯ್ಕೆಯಲ್ಲಿ ರಾಜ್ಯ ಸರ್ಕಾರದ ನಾಮನಿರ್ದೇಶಿತರನ್ನು ಹುಡುಕಾಟ ಮತ್ತು ಆಯ್ಕೆ ಸಮಿತಿಯಲ್ಲಿ ಕಡ್ಡಾಯವಾಗಿ  ಸೇರ್ಪಡೆ ಮಾಡಬೇಕು.

ರಾಜ್ಯ ಸರ್ಕಾರಗಳಿಂದ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರವೇ ಒಟ್ಟಾರೆ ಅಭಿವೃದ್ಧಿಗಾಗಿ, ವೇತನ ಮತ್ತು ಇತರೆ ಭತ್ಯೆಗಳು, ಮಾನವ, ಭೌತಿಕ ಮತ್ತು ತಾಂತ್ರಿಕ ಮೂಲಸೌಕರ್ಯಗಳ ಸೃಜನೆ ಮತ್ತು ನಿರ್ವಹಣೆ, ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಸೌಲಭ್ಯ ಇತ್ಯದಿಗಳನ್ನು ಒದಗಿಸುತ್ತದೆ.  ಈ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ  ಹೆಚ್ಚಿನ ಜವಾಬ್ದಾರಿ  ಮತ್ತು ಬದ್ಧತೆ ಇದೆ.

ನಿಯಮಗಳನ್ನು ಕಡ್ಡಾಯಗೊಳಿಸಿ ಹೇರಿರುವುದು ಮತ್ತು ಪ್ರಸ್ತಾಪಿತ ಯುಜಿಸಿ ನಿಯಮಗಳ ಪರಿಪಾಲನೆ ಮಾಡದಿರುವುದಕ್ಕೆ ಕಟ್ಟುನಿಟ್ಟಾಗಿ ದಂಡ ವಿಧಿಸುವುದು  ಪ್ರಜಾಸತ್ತಾತ್ಮಕವಲ್ಲದ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ.  ಕರಡು ಯುಜಿಸಿ ನಿಯಮಗಳು, 2025 ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸುವ ಹುನ್ನಾರವಾಗಿದೆ.  ಯುಜಿಸಿ ಮತ್ತು ಕೇಂದ್ರ ಸರ್ಕಾರದ ಈ ನಡೆ ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿದ್ದು, ರಾಜ್ಯಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಿ ಅಲಕ್ಷಿಸಿದೆ.

ರಾಜ್ಯ ಸರ್ಕಾರದ ವಿಶ್ವದ್ಯಾನಿಲಯಗಳ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮಗಳು ಯುಜಿಸಿ ವ್ಯಾಪ್ತಿಯಿಂದ ಹೊರಗಿದೆ. ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿ ಶಿಕ್ಷಣ ವಿರುವುದರಿಂದ ಕುಲಪತಿಗಳ ನೇಮಕಾತಿಯು ರಾಜ್ಯ ಸರ್ಕಾರಗಳ ವ್ಯಾಪ್ತಿಗೊಳಪಟ್ಟಿದೆ.

ಉನ್ನತ ಶಿಕ್ಷಣದ ಎಲ್ಲಾ ಅಂಶಗಳಲ್ಲಿಯೂ ಪ್ರಜಾಸತ್ತಾತ್ಮಕ ಪ್ರವೇಶ, ಗುಣಮಟ್ಟದ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಸಾಮಾಜಿಕ ಅಗತ್ಯವನ್ನು ಮನಗಂಡು ಹಾಗೂ ಜಿಇಆರ್ ನ್ನು ಹೆಚ್ಚಿಸುವ ನಿಟ್ಟಿನಲ್ಲಿ  ರಾಜ್ಯ ವಿಶ್ವವಿದ್ಯಾನಿಲಯಗಳನ್ನು ರಾಜ್ಯ ಸರ್ಕಾರ ಸ್ಥಾಪಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕುಲಪತಿಗಳ ನೇಮಕಾತಿಯಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು, ಶಿಫಾರಸ್ಸು ಮಾಡಲು ಎಲ್ಲಾ ಹಕ್ಕೂ ಇದೆ. ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವು ಸಹಕಾರಿ ಒಕ್ಕೂಟದ ತತ್ವಗಳ ಮೇಲೆ ನೇರ ಪ್ರಹಾರ ಮಾಡಿದಂತಿದೆ. ವಿಶ್ವವಿದ್ಯಾಲಯಗಳ ಆಡಳಿತದಿಂದ ರಾಜ್ಯ ಸರ್ಕಾರಗಳ ಪಾತ್ರವನ್ನು ತೆಗೆದುಹಾಕಿ ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ ಅಧಿಕಾರವನ್ನು ಕೇಂದ್ರೀಕೃತಗೊಳಿಸುತ್ತಿದೆ.

ಕೇಂದ್ರದ ಈ ನಡೆ ರಾಜ್ಯ ಸರ್ಕಾರದ ಸಂಸ್ಥೆಗಳನ್ನು ಅಲಕ್ಷಿಸಿ ಶಿಕ್ಷಣದ ಮೇಲೆ ಕೇಂದ್ರದ ನಿಯಂತ್ರಣವನ್ನು ಸಾಧಿಸಲು ತನ್ನ ವಿಸ್ತೃತ ಕಾರ್ಯಸೂಚಿಯ ಭಾಗವಾಗಿದೆ. ರಾಜ್ಯ ಸರ್ಕಾರಗಳ ಒಮ್ಮತವಿಲ್ಲದೇ ಎನ್ಇಪಿ 2020 ಹೇರಿರುವುದು ಇದಕ್ಕೆ ಪುಷ್ಠಿಯನ್ನು ನೀಡುತ್ತದೆ.

ಇದನ್ನು ಅನುಮೋದಿಸಿದರೆ ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರಲ್ಲದೇ ರಾಜಕೀಯ ಆಪ್ತರಿಂದ  ತುಂಬಿಹೋಗಬಹುದು. ಯುಜಿಸಿ ಮತ್ತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಉತ್ಸುಕವಾಗಿವೆ. ಕೇಂದ್ರ ಸರ್ಕಾರದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ತಾರತಮ್ಯ, ಹಣ ದುರುಪಯೋಗ ಮತ್ತು ಆಡಳಿತಾತ್ಮಕ ವೈಫಲ್ಯಗಳ ಮೇಲೆ ಯಾವುದೇ ಕ್ರಮ ಏಕೆ ಕೈಗೊಂಡಿಲ್ಲ.

20.ಯುಜಿಸಿ ತಕ್ಷಣವೇ ತನ್ನ ಕರಡು ನಿಯಮಗಳನ್ನು ಹಿಂಪಡೆದು ಯಾವುದೇ ಬದಲಾವಣೆಗಳನ್ನು ತರುವ ಮುನ್ನ ರಾಜ್ಯ ಮಟ್ಟದಲ್ಲಿ ಸಮಾಲೋಚನಾ ಪ್ರಕ್ರಿಯೆಯನ್ನು ಕೈಗೊಳ್ಳಬೇಕು.

Key words: Appointment, VC, state government, CM Siddaramaiah, UGC rule

 

The post ಕುಲಪತಿಗಳ ನೇಮಕಾತಿ:  ರಾಜ್ಯ ಸರ್ಕಾರದ ಪಾತ್ರ ರದ್ದು:ಯುಜಿಸಿ ನಿಯಮಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪಿ.ಯು. ಉಪನ್ಯಾಸಕರ ಸಂಘದ ಅಧ್ಯಕ್ಷರಿಂದ ನಕಲಿ ದಾಖಲೆ ಸಲ್ಲಿಕೆ ಆರೋಪ.?

ಮೈಸೂರು, ಮಾ.18, 2025:  ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ...

നിയമവിരുദ്ധമായി പ്രവര്‍ത്തിക്കുന്നെന്ന് ആരോപിച്ച് ഉത്തരാഖണ്ഡിലെ 84 മദ്രസകള്‍ അടച്ചുപൂട്ടി ബി.ജെ.പി സര്‍ക്കാര്‍

ഡെറാഡൂണ്‍: നിയമവിരുദ്ധമായി പ്രവര്‍ത്തിക്കുന്നുവെന്ന് ആരോപിച്ച് ഉത്തരാഖണ്ഡിലെ 84 മദ്രസകള്‍ അടച്ചുപൂട്ടി ബി.ജെ.പി...

`ஊதியம் கிடையாது' – போராட்டம் அறிவித்த அரசு ஊழியர்களுக்கு, தமிழ்நாடு அரசு எச்சரிக்கை

பழைய ஓய்வூதிய திட்டத்தை மீண்டும் அமல்படுத்த வேண்டும், பகுதி நேர ஆசிரியர்கள்...

Atreyapuram Pootharekulu: ఆత్రేయపురం కల్తీ నెయ్యి ఘటన.. ల్యాబ్ పరిశీలనలో వెలుగులోకి కీలక వాస్తవాలు!

అంబేద్కర్ కోనసీమ జిల్లా ఆత్రేయపురంలోని కొన్ని పూతరేకుల దుకాణాల్లో వాడింది కల్తీ...