ಮೈಸೂರು,ಜನವರಿ,18,2025 (www.justkannada.in): ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಬಿಜೆಪಿ ಕಾರ್ಯಕರ್ತರು ದೂರು ನೀಡಿರುವ ವಿಚಾರ ಕುರಿತು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಯದುವೀರ್, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪಕ್ಷದ ತತ್ವ ಸಿದ್ಧಾಂತದ ಪ್ರಕಾರ ನಡೆದುಕೊಳ್ಳಲಿ. ಪ್ರತಾಪ್ ಸಿಂಹ ಅವರ ಇತ್ತೀಚಿನ ನಡೆಗೆ ಬೇಸರ ವ್ಯಕ್ತವಾಗಿದೆ. ಕಳೆದ ಮೂರು ನಾಲ್ಕು ತಿಂಗಳಿಂದ ಅವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸಹಜವಾಗಿಯೇ ಕಾರ್ಯಕರ್ತರಿಗೆ ಅದು ಬೇಸರ ತರಿಸಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ವರಿಷ್ಠರಿಗೆ ದೂರು ನೀಡಿದ್ದಾರೆ. ಈ ಕುರಿತು ರಾಜ್ಯಾಧ್ಯಕ್ಷರು ಕ್ರಮಕೈಗೊಳ್ಳುತ್ತಾರೆ. ಸದ್ಯಕ್ಕೆ ಪ್ರತಾಪ್ ಸಿಂಹ ಅವರು ಭಿನ್ನಾಭಿಪ್ರಾಯಗಳನ್ನ ದೂರ ಇರಿಸಲಿ. ಪಕ್ಷಕ್ಕೆ ಧಕ್ಕೆ ಬರದ ರೀತಿ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ ಎಂದು ತಿಳಿಸಿದರು.
ಪಕ್ಷದಿಂದ ಪ್ರತಾಪ್ ಸಿಂಹ ದೂರವಿಲ್ಲ-ಎಲ್.ನಾಗೇಂದ್ರ
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ವಿಚಾರ ಕುರಿತು ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪ್ರತಾಪ್ ಸಿಂಹ ವಿರುದ್ಧ ಕಾರ್ಯಕರ್ತರು ದೂರು ನೀಡಿರೋದು ನಿಜ. ನಿನ್ನೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ದೂರು ನೀಡಿದ್ದಾರೆ. ಪಕ್ಷದಲ್ಲಿ ಗೊಂದಲವಿಲ್ಲ ಆದರೆ ಸಣ್ಣ ಪುಟ್ಟ ವ್ಯತ್ಯಾಸವಿದೆ. ಪಕ್ಷದಿಂದ ಪ್ರತಾಪ್ ಸಿಂಹ ದೂರವಿಲ್ಲ. ಅವರ ಜೊತೆ ನಾವು ಮಾತನಾಡುತ್ತೇವೆ. ಪಕ್ಷದ ಚೌಕಟ್ಟನ್ನು ಯಾರು ಮೀರಬಾರದು. ಪಕ್ಷದ ಸಭೆಯಲ್ಲಿ ಅವರು ಕೂಡ ಭಾಗಿಯಾಗುತ್ತಿದ್ದಾರೆ. ಕೆಲ ಹೋರಾಟಗಳನ್ನು ಪ್ರತ್ಯೇಕವಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಪ್ರತಾಪ್ ಸಿಂಹ ಜೊತೆ ಮಾತನಾಡುತ್ತೇನೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿದರು.
Key words: Pratap Simha , BJP, ideology, MP , Yaduveer
The post ಪ್ರತಾಪ್ ಸಿಂಹ ಪಕ್ಷದ ತತ್ವ ಸಿದ್ಧಾಂತದ ಪ್ರಕಾರ ನಡೆದುಕೊಳ್ಳಲಿ- ಸಂಸದ ಯದುವೀರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.