ಬೆಂಗಳೂರು,ಅಕ್ಟೋಬರ್,2,2026 (www.justkannada.in): ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಇದರ ಗಮನವನ್ನು ಬೇರೆಡೆಗೆ ತಿರುಗಿಸಲು ಕಾಂಗ್ರೆಸ್ ಎಸ್ಐಆರ್ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿಕೆ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಆರಂಭದಲ್ಲೇ ವ್ಯಾಪಕ ಅಕ್ರಮ ಎಸಗಿದ ಕಾಂಗ್ರೆಸ್, ಈಗ ಅದರ ವಿರುದ್ಧವೇ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಲ್ಲಿ ಜನರನ್ನು ಸೇರಿಸಿ ಕಾಂಗ್ರೆಸ್ನವರೇ ಅಕ್ರಮ ಎಸಗಿತ್ತು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ಎನ್ಡಿಎ ದೂರು ನೀಡಿದೆ ಎಂದರು.
ಈ ಮಧ್ಯೆ ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲಷ್ಟೇ ರಾಜ್ಯ ಕಾಂಗ್ರೆಸ್ ನಾಯಕರು ಈ ಪ್ರತಿಭಟನೆಯ ಪ್ರಹಸನ ಆರಂಭಿಸಿದ್ದಾರೆ. ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ನಾನು ದಾಖಲೆ ಸಮೇತ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿಗಳು ಈ ಎಸ್ಐಆರ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.





