ಬೆಂಗಳೂರು, ಜೂನ್,25,2026 (www.justkannada.in): ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡವನ್ನು ಬಾಕಿ ಉಳಿಸಿಕೊಂಡಿದ್ದು ಈ ವಿಚಾರವನ್ನ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕಾಲೆಳೆದಿದೆ.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಬಿಜೆಪಿಯು ಸಚಿವ ಪ್ರಿಯಾಂಕ್ ಖರ್ಗೆ ಅವರ KA42 GA 0099 ಸಂಖ್ಯೆಯ ವಾಹನವು ಸಂಚಾರ ಪೊಲೀಸರ ಕ್ಯಾಮೆರಾಗಳಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿರುವುದು ಹಾಗೂ ಸೀಟ್ ಬೆಲ್ಟ್ ಧರಿಸದೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ದಾಖಲಾಗಿದೆ. ಪ್ರಸ್ತುತ ಈ ವಾಹನದ ಹೆಸರಿನಲ್ಲಿ ಒಟ್ಟು 4 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದು, ಒಟ್ಟು 2,500 ರೂ. ದಂಡ ಪಾವತಿಸಬೇಕಾಗಿದೆ. ಹೀಗಾಗಿ 50% ಆಫರ್ ಬಳಸಿ ಬೇಗ ದಂಡ ಕಟ್ಟಿ ಎಂದು ಲೇವಡಿ ಮಾಡಿದೆ.
“ಸಂಚಾರ ನಿಯಮಗಳು ಎಲ್ಲರ ಜೀವನಾಡಿ ಎಂಬ ನಿಮ್ಮ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಪ್ರಿಯಾಂಕ್ ಖರ್ಗೆ ಅವರೇ! ಆದರೆ… ಸೀಟ್ಬೆಲ್ಟ್ ಧರಿಸುವುದು ಮತ್ತು ವೇಗದ ಮಿತಿ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ? ನಿಮ್ಮ KA42 GA 0099 ವಾಹನವು ಅತಿ ವೇಗ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದೆ.
ಸದ್ಯ ರಾಜ್ಯ ಸರ್ಕಾರವೇ ಜೂನ್ 21 ರಿಂದ ಜುಲೈ 10 ರವರೆಗೆ ಶೇ. 50ರಷ್ಟು ದಂಡ ರಿಯಾಯಿತಿ ನೀಡಿರುವುದರಿಂದ, ಸಚಿವರು ತಕ್ಷಣವೇ ಈ ಡಿಸ್ಕೌಂಟ್ ಆಫರ್ ಬಳಸಿ ತಮ್ಮ ಬಾಕಿ ದಂಡವನ್ನು ಶೀಘ್ರವಾಗಿ ಪಾವತಿಸಿ ಮುಗಿಸಲಿ ಎಂದು ಬಿಜೆಪಿ ಟಾಂಗ್ ಕೊಟ್ಟಿದೆ. ಸಾರ್ವಜನಿಕರಿಗೆ ಬುದ್ಧಿ ಹೇಳುವ ಸಚಿವರೇ ನಿಯಮ ಉಲ್ಲಂಘಿಸಿರುವುದು ಸರಿಯೇ ಎಂದು ಬಿಜೆಪಿ ಟೀಕಿಸಿದೆ.
Key words: Traffic fine, Home Minister, Priyank kharge, car, BJP
The post ಗೃಹ ಸಚಿವರ ಕಾರಿಗೆ ಟ್ರಾಫಿಕ್ ಫೈನ್: 50% ಆಫರ್ ಬಳಸಿ ಬೇಗ ಕಟ್ಟಿ ಎಂದು ಲೇವಡಿ ಮಾಡಿದ BJP appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





