ಬೆಂಗಳೂರು, ಮೇ, 28,2026 (www.justkannada.in): ಕೊಟ್ಟ ಮಾತಿನಂತೆ ಹೈಕಮಾಂಡ್ ಸಲಹೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಇಂದು ರಾಜೀನಾಮೆ ಸಲ್ಲಿಸಿದ್ದು, ಈ ಮೂಲಕ ಹಲವು ದಿನಗಳಿಂದ ಗೊಂದಲದ ಗೂಡಾಗಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಅಂತಿಮ ತೆರೆ ಬಿದ್ದಿದೆ.
ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಸಿದ್ದರಾಮಯ್ಯ ಅವರ ಸುದೀರ್ಘ ರಾಜಕಾರಣದ ಹಾದಿಯ ಬಗ್ಗೆ ಮೆಲುಕು ಹಾಕೋಣ ಬನ್ನಿ..
1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದ ಸಿದ್ದರಾಮಯ್ಯ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ರಾಜ್ಯದಲ್ಲಿ 2013ರಿಂದ 2018ರವರೆಗೆ ಮತ್ತು 2023ರಿಂದ ಇಲ್ಲಿವರೆಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ಒಟ್ಟು 8 ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ.
ಮೈಸೂರಿನ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯನವರು, 1983ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಜನತಾ ಪಕ್ಷದ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪಶುಸಂಗೋಪನೆ ಮುಂತಾದ ಖಾತೆಗಳನ್ನು ನಿರ್ವಹಿಸಿದ್ದರು.
1996ರಿಂದ 1999ರ ವೇಳೆ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಮತ್ತು 2004 ರಿಂದ 2005ರ ಧರಂಸಿಂಗ್ ಅವರ ಸಮ್ಮಿಶ್ರ ಸರ್ಕಾರಗಳಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅಹಿಂದಾ ಸಂಘಟಿಸಿದ್ದಕ್ಕಾಗಿ 2006ರಲ್ಲಿ ಜೆಡಿಎಸ್ ನಿಂದ ಉಚ್ಛಾಟನೆಗೊಂಡ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. 2008-2013 ಮತ್ತು 2019-2023ರ ಅವಧಿಯಲ್ಲಿದ್ದ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ವಿಪಕ್ಷ ನಾಯಕನಾಗಿ ಕೆಲಸ ನಿರ್ವಹಿಸಿದರು.
2013-2018 ಮತ್ತು 2023ರಿಂದ ಇಂದಿನವರೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದರು.
ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 9 ಬಾರಿ ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರರಾಗಿ, 1985ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ, 1994ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನತಾ ದಳದಿಂದ, 2004ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನಿಂದ , 2006ರ ಉಚ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು, 2008, 2013 ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ, 2018ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ 2023ರಲ್ಲಿ ಪುನಃ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ನಿಂದಲೇ ಸ್ಪರ್ಧಿಸಿ ಜಯಭೇರಿ ಬಾರಿಸಿ ಎರಡನೇ ಅವಧಿಗೆ ಸಿಎಂ ಆಗಿ ಆಯ್ಕೆಯಾದರು.
Key words: MLA to CM, Siddaramaiah, long political, journey
The post ಶಾಸಕ ಸ್ಥಾನದಿಂದ ಸಿಎಂ ಸ್ಥಾನದವರೆಗೆ: ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ ಹೀಗಿತ್ತು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





