ಬೆಂಗಳೂರು,ಆಗಸ್ಟ್,28,2025 (www.justkannada.in): ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 37 ಲಕ್ಷ ರೈತರಿಗೆ ರೂ.28ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8362.68 ಕೋಟಿ ಸಾಲ ವಿತರಣೆ ಮಾಡಲಾಗಿದೆ. ರೈತರಿಗೆ ಸಕಾಲದಲ್ಲಿ ಕೃಷಿ ಸಾಲವನ್ನು ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿದ್ದ ರೂ.5,600 ಕೋಟಿಗಳಿಂದ ರೂ.3,236.11 ಕೋಟಿಗೆ ಅಂದರೆ ಶೇ.42.21ರಷ್ಟು ಕಡಿಮೆ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ.96.07 ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ.
ರಾಜ್ಯದಲ್ಲಿ 28516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿದ್ದು, ಅಂತಹ ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಲ್ಲಿ 2200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾ ಇರಿಸಬೇಕು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ. ಹಾಲು ಉತ್ಪಾದಕ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು.
ಕನ್ನಡ ಸಾಹಿತ್ಯ ಪರಿಷತ್ ನ ಅವ್ಯವಹಾರಗಳ ಕುರಿತು ಡಿಆರ್ ಸಿಎಸ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲವು ಸದಸ್ಯರ ಸದಸ್ಯತ್ವವನ್ನು ಪರಿಷತ್ ರದ್ದುಪಡಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ 126 ಹುದ್ದೆಗಳು ಹಾಗೂ ಸಹಕಾರ ಸಂಘಗಳ ನಿರೀಕ್ಷಕರ 403 ಹುದ್ದೆಗಳು ಖಾಲಿಯಿವೆ. ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದ ಸಿಎಂ ಸಿದ್ದರಾಮಯ್ಯ, ಸಹಕಾರ ಸಂಘಗಳ ನಿಬಂಧಕರ ಕಚೇರಿಯ ವ್ಯಾಪ್ತಿಯ ಸೇವೆಗಳನ್ನು ಗಣಕೀಕರಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಾಜ್ಯದಲ್ಲಿ 7074 ಗಿರವಿದಾರ ಸಂಸ್ಥೆಗಳು ಹಾಗೂ 1468 ಚೀಟಿ ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ಚೀಟಿನಿಧಿಗಳ ಅಧಿನಿಯಮ 1982ರಡಿ ನೋಂದಣಿಯಾಗಿವೆ. ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಗಿರವಿದಾರ ಸಂಸ್ಥೆಗಳು ಹಾಗೂ ಚೀಟಿ ಸಂಸ್ಥೆಗಳ ಮೇಲೆ ನಿಗಾ ಇರಿಸಬೇಕು. ರಾಜ್ಯದಲ್ಲಿ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಹಕಾರ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: 8362.68 crore, farmers, Debt, Distribution, CM Siddaramaiah
The post ರೈತರಿಗೆ 8362.68 ಕೋಟಿ ರೂ. ಸಾಲ ವಿತರಣೆ: ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಖಾತ್ರಿಪಡಿಸಿ – ಸಿಎಂ ಸಿದ್ದರಾಮಯ್ಯ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





