ಮೈಸೂರು,ಫೆಬ್ರವರಿ,11,2026 (www.justkannada.in): ಅಕ್ರಮ ಮಾದಕ ವಸ್ತು ಸಾಗಾಟದ ಮೇಲೆ ಮೈಸೂರಿನ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳಾದ ಮಂಡಿ ಮೊಹಲ್ಲಾದ ಮೊಹಮ್ಮದ್ ಕರೀಂ(29) , ಕಲ್ಯಾಣಗಿರಿ ನಿವಾಸಿ ನಿಷಾದ್ ಪಾಷ(36) ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 3.14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎ1 ಮೊಹಮ್ಮದ್ ಕರೀಂ @ಕಾಲು ಈತನ ಮೇಲೆ ಈಗಾಗಲೇ ಮಂಡಿ ಠಾಣೆ, ಎನ್.ಆರ್ ಪೊಲೀಸ್ ಠಾಣೆ ಹಾಗೂ ಸೆನ್ ಪೊಲೀಸ್ ಠಾಣೆಯಲ್ಲಿ ಒಟ್ಟು 05 ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿವೆ. ಹಾಗೂ ಎ2 ನಿಷಾದ್ ಪಾಷ ಈತನ ಮೇಲೆ ಈಗಾಗಲೇ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ 03 ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ಹಾಗೂ ನಜರಬಾದ್ ಪೊಲೀಸ್ ಠಾಣೆ ಮತ್ತು ಉದಯಗಿರಿ ಪೊಲೀಸ್ ಠಾಣೆಯಲ್ಲಿ 02 ಎನ್.ಡಿ.ಪಿ.ಎಸ್ ಪ್ರಕರಣಗಳು ಸೇರಿದಂತೆ ಒಟ್ಟು 05 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಅಲ್ಲದೇ ಸಿಸಿಬಿ ಪೊಲೀಸರು ಮಂಡಿ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 35 ಗ್ರಾಂ ಮತ್ತು 550 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಗಳಾದ ಬಂಬೂಬಜಾರ್ ನ ನಿವಾಸಿಗಳಾದ ಸಂಜಯ್ ಮೈಸೂರು ಹಾಗೂ ರಾಜ್‌ಕುಮಾರ್ ನನ್ನು ಬಂಧಿಸಿದ್ದಾರೆ. ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡಲು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನ ಟಿವಿಎಸ್ KA-09-JE-6223 ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಎ1 ಮೊಹಮ್ಮದ್ ಅಫಾಕ್ ನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಮೈಸೂರು ನಗರದಲ್ಲಿ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆ ಮಾಡುವವರ ಮೇಲೆ ನಗರ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮೈಸೂರು ನಗರ ಪೊಲೀಸ್ ವತಿಯಿಂದ ನೂತನವಾಗಿ ಸ್ಥಾಪಿಸಲಾಗಿರುವ ”ವಿಮುಕ್ತಿ ಸಹಾಯವಾಣಿ ಸಂಖ್ಯೆ 8277948080” ಗೆ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ಹಂಚಿಕೊಂಡು ಮೈಸೂರು ನಗರವನ್ನು ಮಾದಕವಸ್ತು ಮುಕ್ತ ನಗರವನ್ನಾಗಿಸಲು ಪೊಲೀಸರೊಂದಿಗೆ ಕೈ ಜೋಡಿಸಲು ಕೋರಿದ್ದಾರೆ.
Key words: Mysore Police, Arrest, accused, illegal, drug
The post ಮೈಸೂರು ಪೊಲೀಸರ ಕಾರ್ಯಾಚರಣೆ: ಅಕ್ರಮ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಅರೋಪಿಗಳ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





