ಬೆಂಗಳೂರು ಜನವರಿ,8 ,2025 (www.justkannada.in): ಬಿಜೆಪಿಯವರು ಕೇವಲ ಸುಳ್ಳಿನಲ್ಲಿ ಮಾತ್ರವಲ್ಲ ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತಾಗಿದೆ. ನಾವು ಇದನ್ನು ಸಹಿಸಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟದ ಮಾರ್ಗ ಹಿಡಿಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಗುಡಗಿದರು.
KPCC ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ನಡೆದಿರುವ ಮತಗಳ್ಳತನದ ದಾಖಲೆಗಳನ್ನು, ಮತಗಳ್ಳತನದ ವ್ಯವಸ್ಥಿತ ಷಡ್ಯಂತ್ರ ಮತ್ತು ವ್ಯವಸ್ಥಿತ ಕಾರ್ಯತಂತ್ರದ ದಾಖಲೆಗಳನ್ನು ವಿವರಿಸಿ ಮಾತನಾಡಿದರು.
ಮೋದಿ ಪ್ರಧಾನಿ ಆದ ಬಳಿಕ ಎಲ್ಲಾ ಸಾಂವಿಧಾನದ ಸಂಸ್ಥೆಗಳ ಮೌಲ್ಯ ಹಾಳು ಮಾಡಿ, ಚುನಾವಣಾ ಆಯೋಗ-ಸಿಬಿಐ ಸೇರಿ ಕೇಂದ್ರ ಸರ್ಕಾರದ ಅಡಿಯಾಳಾಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಬಿಜೆಪಿ ಮತಗಳ್ಳತನದ ಮೂಲಕ ಅನೇಕ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಲೋಕಸಭೆ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ನಿರಂತರ ಅಧ್ಯಯನ, ತಪಸಣೆ ಬಳಿಕ ದಾಖಲೆ ಸಮೇತ ಮತಗಳ್ಳತನವನ್ನು ದೇಶದ ಜನರಿಗೆ ಮನವರಿಕೆ ಮಾಡಿಸಿದ್ದಾರೆ ಎಂದು ವಿವರಿಸಿದರು.
ಸಂವಿಧಾನಬಾಹಿರವಾಗಿ ಅಧಿಕಾರ ಹಿಡಿಯುವುದು ಸಂವಿಧಾನಕ್ಕೆ ಎಸಗುವ ದ್ರೋಹ. ಪ್ರಜಾಪ್ರಭುತ್ವಕ್ಕೆ ಎಸಗಿದ ವಂಚನೆ. ರಾಹುಲ್ ಗಾಂಧಿಯವರು, ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆಯಲ್ಲಿ ನಡೆದ ಮತಗಳ್ಳತನವನ್ನು ಸ್ಪಷ್ಟವಾಗಿ, ದಾಖಲೆ ಸಮೇತ ಬಯಲಿಗೆ ಎಳೆದು ದಾಖಲೆಗಳನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ದೇಶದ ಜನರ ಮುಂದೆ ಇರಿಸಿದ ದಾಖಲೆಗಳಿಗೂ ಉತ್ತರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯ ಸ್ಥಾನಮಾನವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ್ದಾರೆ. ಪ್ರಭುತ್ವ ಚುನಾವಣಾ ಪ್ರಕ್ರಿಯಿಯಲ್ಲಿ ಮೂಗು ತೂರಿಸಬಾರದು ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಅದಕ್ಕಾಗಿ ಮುಕ್ತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ನಮ್ಮ ಸಂವಿಧಾನ ರೂಪಿಸಿದೆ. ಸಂವಿಧಾನದ ಮೌಲ್ಯ ಉಳಿಯಬೇಕಾದರೆ ಸ್ವತಂತ್ರ ಚುನಾವಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು ಎಲ್ಲಾ ಪಕ್ಷಗಳ ಜವಾಬ್ದಾರಿ ಎಂದರು.
ಆದ್ದರಿಂದ ನಾವು ಸಂವಿಧಾನದ ಮತ್ತು ಪ್ತಜಾಪ್ರಭುತ್ವ ಕಾಪಾಡಲು ಕಾಂಗ್ರೆಸ್ ಪಕ್ಷದಿಂದ ಕೋಟಿಗೂ ಅಧಿಕ ಮಂದಿಯ ಸಹಿ ಸಂಗ್ರಹ ಮಾಡಲಾಗಿದೆ. ಇದನ್ನು ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಗಳಿಗೂ ನೀಡಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಸಚಿವರೂ ಆದ ಸತೀಶ್ ಜಾರಕಿಹೊಳಿ, ಪಕ್ಷದ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಸಲೀಂ ಅಹಮದ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷಮಂಜುನಾಥ್ ಸೇರಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
Key words: BJP, lies, vote rigging, CM, Siddaramaiah
The post ಬಿಜೆಪಿ ಕೇವಲ ಸುಳ್ಳಿನಲ್ಲಿ ಮಾತ್ರವಲ್ಲ ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತು: ಸಿ.ಎಂ.ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





