ಮೈಸೂರು, SEP.20,2026: ರಾಜ್ಯದಲ್ಲಿ ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಉಂಟಾಗುತ್ತಿರುವ ವಿವಾದಗಳು ಅತ್ಯಂತ ಸೂಕ್ಷ್ಮವಾದ ಸಾಮಾಜಿಕ ವಿಚಾರವಾಗಿ ಪರಿಣಮಿಸುತ್ತಿವೆ. ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ಭ್ರಾತೃತ್ವವನ್ನು ಬೆಳೆಸಬೇಕೇ ಹೊರತು, ರಾಜಕೀಯ ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಎಚ್.ಎ. ವೆಂಕಟೇಶ್ ಹೇಳಿದ್ದಾರೆ.
ಟಿ. ನರಸೀಪುರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ನೀಡಿದ ಸೂಚನೆಗಳ ಕುರಿತು ವಿವಾದ ಉಂಟಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಸೀದಿ ಮುಂಭಾಗದಲ್ಲಿ ಪಟಾಕಿ ಸಿಡಿಸುವುದು ಸೇರಿದಂತೆ ಕೆಲವು ಚಟುವಟಿಕೆಗಳ ಕುರಿತು ಪೊಲೀಸರು ಮುನ್ನೆಚ್ಚರಿಕೆ ಸೂಚನೆ ನೀಡಿದ್ದರು. ಈ ಹೇಳಿಕೆಗಳನ್ನು ಬಿಜೆಪಿ ನಾಯಕರು ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಪ್ರಕರಣ ರಾಜಕೀಯ ಸಂಘರ್ಷದ ಸ್ವರೂಪ ಪಡೆದಿದೆ.
“ಪೊಲೀಸ್ ಅಧಿಕಾರಿಯ ಹೇಳಿಕೆಯ ಸಂಪೂರ್ಣ ಸಂದರ್ಭವನ್ನು ಪರಿಶೀಲಿಸದೆ, ಹೇಳಿಕೆಯ ಕೆಲವು ಭಾಗಗಳನ್ನು ಮಾತ್ರ ಸಾರ್ವಜನಿಕವಾಗಿ ಪ್ರಚಾರ ಮಾಡುವುದರಿಂದ ಜನರಲ್ಲಿ ತಪ್ಪು ಕಲ್ಪನೆ ಮತ್ತು ಆತಂಕ ಉಂಟಾಗುವ ಸಾಧ್ಯತೆ ಇದೆ. ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಚಾರದಲ್ಲಿ ರಾಜಕೀಯ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು” ಎಂದು ವೆಂಕಟೇಶ್ ಹೇಳಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಟಿ. ನರಸೀಪುರದ ವಿಚಾರದಲ್ಲಿ ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಟೀಕಿಸಿರುವುದು ಮತ್ತು ಮೆರವಣಿಗೆಯ ಸಂದರ್ಭದಲ್ಲಿ ಮಾಡಿದ ಭಾಷಣ ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಹೇಳಿಕೆಗಳು ಹಾಗೂ ಇತರ ನಾಯಕರ ಭಾಷಣಗಳ ಸಂಪೂರ್ಣ ವಿಡಿಯೋ, ಪೊಲೀಸ್ ದಾಖಲೆಗಳು ಮತ್ತು ಸಂಬಂಧಿತ ಸಾಕ್ಷ್ಯಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ವೆಂಕಟೇಶ್ ಆಗ್ರಹಿಸಿದ್ದಾರೆ. ಪೊಲೀಸರು ನೀಡುವ ಪ್ರತಿಯೊಂದು ಸೂಚನೆಯನ್ನೂ ರಾಜಕೀಯ ಬಣ್ಣದಲ್ಲಿ ನೋಡುವುದು ಸರಿಯಲ್ಲ.

“ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ:
ಟಿ. ನರಸೀಪುರದ ಘಟನೆ ಸೇರಿದಂತೆ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಉಂಟಾಗಿರುವ ವಿವಾದಗಳ ಕುರಿತು ವಾಸ್ತವಾಂಶ ಹೊರಬರಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಹೇಳಿಕೆಗಳು, ರಾಜಕೀಯ ನಾಯಕರ ಭಾಷಣಗಳು, ಪ್ರತಿಭಟನೆಗಳ ಸಂದರ್ಭ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳು ಹಾಗೂ ವದಂತಿಗಳ ಮೂಲ ಸೇರಿದಂತೆ ಎಲ್ಲಾ ಅಂಶಗಳನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಗಣೇಶೋತ್ಸವಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸಲಿ:

“ಗಣೇಶೋತ್ಸವ ಯಾರೊಬ್ಬರ ರಾಜಕೀಯ ಸ್ವತ್ತಲ್ಲ. ಅದು ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆ. ಯಾವುದೇ ಪಕ್ಷವಾಗಲಿ ಅಥವಾ ಸಂಘಟನೆಯಾಗಲಿ ಧಾರ್ಮಿಕ ಆಚರಣೆಯನ್ನು ರಾಜಕೀಯ ಸಂಘರ್ಷದ ಸಾಧನವನ್ನಾಗಿ ಮಾಡಬಾರದು. ಹಾಗೆಯೇ ಯಾವುದೇ ಸಮುದಾಯವೂ ಭಯಪಡುವಂತಹ ವಾತಾವರಣ ನಿರ್ಮಾಣವಾಗಬಾರದು,” ವೆಂಕಟೇಶ್ ಹೇಳಿದ್ದಾರೆ.
ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಶಾಂತಿ ಎರಡನ್ನೂ ರಕ್ಷಿಸುವ ಜವಾಬ್ದಾರಿ ಸರ್ಕಾರ, ಪೊಲೀಸ್ ಇಲಾಖೆ, ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳ ಮೇಲಿದೆ. ಗಣೇಶೋತ್ಸವವು ಭಯದ ಸಂಕೇತವಾಗದೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಹಬ್ಬವಾಗಬೇಕು ಎಂದು ಅವರು ತಿಳಿಸಿದ್ದಾರೆ.






