ಮೈಸೂರು, ಮಾರ್ಚ್, 31,2026 (www.justkannada.in): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಂಗಳವಾರ ಸೇವೆಯಿಂದ ನಿವೃತ್ತಿ ಹೊಂದಿದ್ದು, ನಿಗಮದ ವತಿಯಿಂದ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಗಮದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆ.ಎಂ. ಮುನಿಗೋಪಾಲ್ ರಾಜು ಅವರನ್ನು ಆತ್ಮೀಯವಾಗಿ ಅಭಿನಂದಿಸಿ ವಿದಾಯ ಹೇಳಿದರು. ಈ ವೇಳೆ ಮಾತನಾಡಿದ ಹಲವು ಅಧಿಕಾರಿಗಳು, ಕೆ.ಎಂ. ಮುನಿಗೋಪಾಲ್ ರಾಜು ಅವರ ನಾಯಕತ್ವ, ಕಾರ್ಯವೈಖರಿ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಸ್ಮರಿಸಿ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ನಂತರ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿ, ಕೆ.ಎಂ. “ಮುನಿಗೋಪಾಲ್ ರಾಜು ಅವರು ಬಂಡೆಯಂತಹ ವ್ಯಕ್ತಿತ್ವ ಹೊಂದಿದ್ದು, ಕೆಲಸದ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಯಾರನ್ನೂ ನೋಯಿಸದೆ ಮತ್ತು ಅಗೌರವದಿಂದ ಕಾಣದೆ ಕಾರ್ಯನಿರ್ವಹಿಸುವ ಗುಣ ಹೊಂದಿದ್ದರು. ಯಾವುದೇ ಯೋಜನೆಗಳ ಅನುಷ್ಠಾನ ಮತ್ತು ನಿರ್ಧಾರಗಳಲ್ಲಿ ದೃಢ ನಿಲುವು ತಾಳುತ್ತಿದ್ದ ಅವರು, ಜವಾಬ್ದಾರಿಯುತ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದವರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ” ಎಂದು ಹಾರೈಸಿದರು.
ಎಲ್ಲರ ಸಹಕಾರದಿಂದ ಯಶಸ್ಸು ಸಿಕ್ಕಿದೆ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಎಂ. ಮುನಿಗೋಪಾಲ್ ರಾಜು ಅವರು, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಲು ಎಲ್ಲರಿಂದಲೂ ಉತ್ತಮ ಸಹಕಾರ ಲಭಿಸಿದೆ ಎಂದು ಹೇಳಿದರು. ನಿಗಮದ ಅಧ್ಯಕ್ಷರು ಕೆಲಸದ ಪ್ರತಿಯೊಂದು ಹಂತದಲ್ಲೂ ಕೈಜೋಡಿಸಿದ್ದು, ಎಂಡಿಯಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಿ, ನಿಗಮದ ಕಾರ್ಯಗಳು ಸುಗಮವಾಗಿ ನಡೆಯಲು ನೆರವಾಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಗಮ ಕಚೇರಿಯಲ್ಲಿ ತಾಂತ್ರಿಕ ನಿರ್ದೇಶಕರಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಯಶಸ್ಸಿನಲ್ಲಿ ಹಲವರ ಸಹಕಾರವಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದರ ಪರಿಣಾಮ ದೊಡ್ಡಮಟ್ಟದ ಯಶಸ್ಸು ದೊರೆತಿದೆ ಎಂದು ಹೇಳಿ, ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ನಿರ್ದೇಶಕರಾದ ಡಿ.ಜೆ. ದಿವಾಕರ್, ಪ್ರಮುಖ ಅಧಿಕಾರಿಗಳಾದ ಎಲ್. ಲೋಕೇಶ್, ಜಿ. ರೇಣುಕಾ, ಶರಣಮ್ಮ ಜಂಗಿನ್, ಲಿಂಗರಾಜಮ್ಮ, ಬಿ.ಆರ್. ರೂಪ, ಸುನೀಲ್ ಕುಮಾರ್, ಸೋಮಶೇಖರ್ ಮತ್ತಿತರರು ಇದ್ದರು.
Key words: Retired, CESC, K.M. Munigopal Raju, felicitated, officers and staff
The post ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ನಿವೃತ್ತಿ: ಆತ್ಮೀಯ ಬೀಳ್ಕೊಡುಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





