ಮೈಸೂರು,ಫೆಬ್ರವರಿ,9,2026 (www.justkannada.in): ಈ ಭಾಗದ ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಹೆಜ್ಜೆಯಾಗಿ, ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ (ಬಿಎಚ್ಐಒ) ಮೈಸೂರಿನ ಮೊದಲ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ (BMT) ಘಟಕವನ್ನು ಉದ್ಘಾಟಿಸಲಾಗಿದೆ.
ಹೆಬ್ಬಾಳ್ ನಲ್ಲಿರುವ ಬಿಎಚ್ ಐಒ ಆವರಣದಲ್ಲಿ ಸ್ಥಾಪಿಸಲಾದ ಈ ಅತ್ಯಾಧುನಿಕ ಸೌಲಭ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ (ಬಿಆರ್ ಬಿ ಎನ್ ಎಂಪಿಎಲ್), ಮೈಸೂರು ಸಂಸ್ಥೆ ಸಿಎಸ್ ಆರ್ ನಿಧಿಯಡಿ ಪ್ರಾಯೋಜಕತ್ವ ನೀಡಿದೆ.
ಈ ಘಟಕವನ್ನು ಬಿಆರ್ ಬಿ ಎನ್ ಎಂಪಿಎಲ್ ನ ಹಿರಿಯ ಮಹಾಪ್ರಬಂಧಕ ಕುಮಾರ್ ರಾಕೇಶ್ ಗುಪ್ತಾ ಹಾಗೂ ಬಿಎಚ್ ಐಒ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಇದರಿಂದ ಮೈಸೂರಿನ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ. ಇದುವರೆಗೆ ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗೆ ಬೆಂಗಳೂರಿಗೆ ಪ್ರಯಾಣಿಸಬೇಕಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ವೆಚ್ಚ, ದೀರ್ಘ ನಿರೀಕ್ಷಾ ಅವಧಿ ಹಾಗೂ ಮಾನಸಿಕ-ಆರ್ಥಿಕ ಒತ್ತಡವನ್ನು ಎದುರಿಸಬೇಕಾಗುತ್ತಿತ್ತು.
ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಎನ್ನುವುದು ಅತ್ಯಂತ ವಿಶೇಷ ಮತ್ತು ಜೀವ ಉಳಿಸುವ ಚಿಕಿತ್ಸಾ ವಿಧಾನವಾಗಿದ್ದು, ಹಾನಿಗೊಳಗಾದ ಅಥವಾ ರೋಗಗ್ರಸ್ತ ರಕ್ತ ಉತ್ಪಾದಕ ಸ್ಟೆಮ್ ಸೆಲ್ ಗಳನ್ನು ರೋಗಿಯದೇ ಅಥವಾ ಹೊಂದಾಣಿಕೆಯ ದಾನಿಯಿಂದ ಪಡೆದ ಆರೋಗ್ಯಕರ ಕೋಶಗಳಿಂದ ಬದಲಾಯಿಸಲಾಗುತ್ತದೆ. ಇದು ಲ್ಯೂಕೇಮಿಯಾ, ಲಿಂಫೋಮಾ, ಮಲ್ಟಿಪಲ್ ಮೈಯೆಲೋಮಾ ಸೇರಿದಂತೆ ವಿವಿಧ ರಕ್ತ ಕ್ಯಾನ್ಸರ್ ಗಳು ಹಾಗೂ ಕೆಲವು ಜನ್ಯ ಮತ್ತು ರೋಗನಿರೋಧಕ ಸಂಬಂಧಿತ ಕಾಯಿಲೆಗಳಿಗೆ ಅತ್ಯಗತ್ಯವಾದ ಚಿಕಿತ್ಸೆ ಆಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಿ.ಎಸ್. ಅಜಯ್ ಕುಮಾರ್, ಈ ಘಟಕದ ಉದ್ಘಾಟನೆಯನ್ನು ಮೈಸೂರಿನ ಕ್ಯಾನ್ಸರ್ ಚಿಕಿತ್ಸೆಗೆ ನಿರ್ಣಾಯಕ ಕ್ಷಣವೆಂದು ಬಣ್ಣಿಸಿದರು. ಹೊಸ ಘಟಕವು ಅಂತರರಾಷ್ಟ್ರೀಯ ಮಟ್ಟದ ಶುಚಿತ್ವ, ಸೋಂಕು ನಿಯಂತ್ರಣ ಹಾಗೂ ರೋಗಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಅತ್ಯುತ್ತಮ ಚಿಕಿತ್ಸಾ ಫಲಿತಾಂಶಗಳನ್ನು ಖಚಿತಪಡಿಸುತ್ತದೆ ಎಂದು ಅವರು ತಿಳಿಸಿದರು.
“ಈ ಬಿಎಂಟಿ ಘಟಕದೊಂದಿಗೆ ಬಿಎಚ್ ಐಒ ಈಗ ಜಾಗತಿಕ ಮಟ್ಟದ ಪ್ರಮುಖ ಕ್ಯಾನ್ಸರ್ ಕೇಂದ್ರಗಳ ಸಮಾನವಾಗಿ ನಿಂತಿದೆ. ಇಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದೊರೆಯುವ ಗುಣಮಟ್ಟದ ಸೇವೆಯೇ ಲಭ್ಯವಾಗಲಿದೆ. ಈ ಸೌಲಭ್ಯದಿಂದ ಕುಟುಂಬಗಳ ಮೇಲೆ ಬೀಳುವ ಆರ್ಥಿಕ ಹಾಗೂ ಮಾನಸಿಕ ಹೊರೆ ಬಹುಮಟ್ಟಿಗೆ ಕಡಿಮೆಯಾಗಲಿದೆ. ಜೊತೆಗೆ, ಈ ಯೋಜನೆಯನ್ನು ಅತ್ಯಂತ ಮಹತ್ವದ ಸಿಎಸ್ಆರ್ ಸಹಕಾರವೆಂದು ಗುರುತಿಸಿ ಬಿಆರ್ ಬಿ ಎನ್ ಎಂಪಿಎಲ್ ಗೆ ಕೃತಜ್ಞತೆ ಸಲ್ಲಿಸಿದರು.
ಬಿಆರ್ ಬಿ ಎನ್ ಎಂಪಿಎಲ್ ನ ಹಿರಿಯ ಮಹಾಪ್ರಬಂಧಕ ಕುಮಾರ್ ರಾಕೇಶ್ ಗುಪ್ತಾ ಮಾತನಾಡಿ, ಸಂಸ್ಥೆಯ ಸಿಎಸ್ ಆರ್ ತತ್ವಶಾಸ್ತ್ರವು ದಾನಕ್ಕಿಂತಲೂ ದೀರ್ಘಕಾಲೀನ ಹಾಗೂ ಸುಸ್ಥಿರ ಸಾಮಾಜಿಕ ಪರಿಣಾಮ ಸೃಷ್ಟಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಭರತ್ ಕ್ಯಾನ್ಸರ್ ಆಸ್ಪತ್ರೆಯನ್ನು ಅದರ ವಿಶ್ವಾಸಾರ್ಹತೆ, ಸಾಬೀತಾದ ಸಾಮರ್ಥ್ಯ ಮತ್ತು ಸಮಾಜದಲ್ಲಿ ಗಳಿಸಿರುವ ನಂಬಿಕೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಮೈಸೂರಿನಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕದ ತೀವ್ರ ಅಗತ್ಯವನ್ನು ಮನಗಂಡು ಈ ಯೋಜನೆಗೆ ₹1.70 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದರು. ಈ ಮೊದಲನೇ ಬಗೆಯ ಸೌಲಭ್ಯದ ಆರಂಭದೊಂದಿಗೆ, ಮೈಸೂರಿನಲ್ಲಿ ಸಮಗ್ರ ಹಾಗೂ ಉನ್ನತ ಮಟ್ಟದ ಕ್ಯಾನ್ಸರ್ ಚಿಕಿತ್ಸೆಯ ಹೊಸ ಯುಗ ಆರಂಭವಾಗಿದೆ. ಇದರಿಂದ ಅಗತ್ಯವಿರುವ ಜನರಿಗೆ ಜೀವ ಉಳಿಸುವ ಚಿಕಿತ್ಸೆ ಈಗ ಮನೆ ಸಮೀಪದಲ್ಲಿಯೇ ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಕಿರಣ ಚಿಕಿತ್ಸಾ ತಜ್ಞರು ಹಾಗೂ ವೈದ್ಯಕೀಯ ಅಧೀಕ್ಷಕಿ ಡಾ. ವೈ.ಎಸ್. ಮಾಧವಿ, ಬಿಎಚ್ಐಒ ಮುಖ್ಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ಅವಿನಾಶ್ ಸಿ.ಬಿ., ಹಿಮಾಟೋ ಆಂಕೊಲಾಜಿಸ್ಟ್ ಹಾಗೂ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ವೈದ್ಯರಾದ ಡಾ. ನಟರಾಜ್ ಮತ್ತು ಡಾ. ಸಂತೋಷ್ ಕುಮಾರ್ ಕೆ.ಎನ್., ಹಿರಿಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ಅಭಿಲಾಶ್ ಜಿ.ಹೆಚ್., ಮಕ್ಕಳ ಹಿಮಾಟಾಲಜಿಸ್ಟ್ ಮತ್ತು ಆಂಕೊಲಾಜಿಸ್ಟ್ ಡಾ. ಸೌಮ್ಯ, ಬಿಎಚ್ ಐಒ ಸಿಒಒ ಗೌತಮ್ ಧಮೇರ್ಲಾ, ಬಿಆರ್ ಬಿ ಎನ್ ಎಂಪಿಎಲ್ ನ ಜನರಲ್ ಮ್ಯಾನೇಜರ್ ಗಳಾದ ಕೆ. ದಿನಕರ ಹಾಗೂ ದಿನೇಶ್ ಕುಮಾರ್ ಆನಂದ್, ಮ್ಯಾನೇಜರ್ ಮೋಹಿತ್ ಅಗರ್ ವಾಲ್ ಮತ್ತು ಪ್ರೊಸೆಸ್ ಅಸಿಸ್ಟಂಟ್ ಎಂ.ಪಿ. ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Mysore, cancer treatment, bone marrow transplant unit
The post ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿನೂತನ ಹೆಜ್ಜೆ: ಮೈಸೂರಿನ ಮೊದಲ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಉದ್ಘಾಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





