ಬೆಂಗಳೂರು,ನವೆಂಬರ್,6,2025 (www.justkannada.in): ಕರ್ನಾಟಕ ರಾಜ್ಯ ಸರ್ಕಾರದ ಏಕೈಕ ಜಾಹೀರಾತು ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಂಟಿಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಕೆಎಸ್‌ಎಂಸಿಎ) ಕಂಪನಿಯು ವಿಶೇಷ ಲಾಭಾಂಶದ ಮೊತ್ತ ರೂ.34.13 ಕೋಟಿಗಳನ್ನು ಇಂದು ಸರ್ಕಾರಕ್ಕೆ ನೀಡಿತು.
ಕಂಪನಿಯ ಪರವಾಗಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮತ್ತು ಕೆಎಸ್‌ಎಂಸಿಎ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಕೃಷ್ಣ ಸೈಲ್ ಅವರು ವಿಧಾನಸೌಧದಲ್ಲಿ ವಿಶೇಷ ಲಾಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ಅತೀಕುಲ್ಲಾ ಶರೀಫ್ ಹಾಗೂ ಉಪ ಪ್ರಧಾನ ವ್ಯವಸ್ಥಾಪಕರಾದ ಪಿ.ಎಸ್. ನಂದೀಶ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು ಮಾತನಾಡಿ ಸಂಸ್ಥೆಯು ಇದುವರೆಗೆ ಯಶಸ್ಸಿನ ಪಥದಲ್ಲಿ ಲಾಭದಾಯಕವಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಆದರೆ, ಸಂಸ್ಥೆಯು ಈ ಹಿಂದೆ ನಿರ್ವಹಿಸಿಕೊಂಡು ಬಂದಿದ್ದ ಅಬಕಾರಿ ಭದ್ರತಾ ಚೀಟಿ ಮುದ್ರಣ ಮತ್ತು ಮಾರಾಟ ವ್ಯವಹಾರವು ಸಂಸ್ಥೆಯಿಂದ ಕೈಬಿಟ್ಟು ಹೋಗಿರುವುದರಿಂದ ಸಂಸ್ಥೆಯ ವಹಿವಾಟು ಮತ್ತು ಲಾಭದಾಯಕತೆ ಕಡಿಮೆಯಾಗಿದೆ. ಮುಖ್ಯಮಂತ್ರಿಗಳು ಈ ಅಬಕಾರಿ ಭದ್ರತಾ ಚೀಟಿ ಮುದ್ರಣ ಮತ್ತು ಮಾರಾಟ ವ್ಯವಹಾರವನ್ನು ಮತ್ತೆ ಕೆಎಸ್‌ಎಂಸಿಎ ಸಂಸ್ಥೆಗೆ ವಹಿಸಿಕೊಡಬೇಕೆಂದು ಹಾಗೂ ಸಂಸ್ಥೆಯ ಆರ್ಥಿಕಾಭಿವೃದ್ಧಿಗೆ ಬೆಂಬಲಿಸಬೇಕೆಂದು ಕೋರಿದರು.
ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ ಕೃಷ್ಣ ಸೈಲ್ ಮಾತನಾಡಿ ಸರ್ಕಾರವು ಸಂಸ್ಥೆಗೆ ನೀಡಲಾಗಿರುವ 4ಜಿ ವಿನಾಯಿತಿಯಲ್ಲಿ ಹೆಚ್ಚುವರಿಯಾಗಿ ಡಿಜಿಟಲೈಜೇಶನ್ ಕಾರ್ಯ ಚಟುವಟಿಕೆಗಳನ್ನು ಸೇರ್ಪಡೆ ಮಾಡಲು ಹಾಗೂ ಸಂಸ್ಥೆಯ ಜಾಹೀರಾತು ಬಿಡುಗಡೆ ಬಾಕಿ ಮೊತ್ತವನ್ನು ಸಕಾಲದಲ್ಲಿ ಪಾವತಿ ಮಾಡಲು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು ಮುಖ್ಯಮಂತ್ರಿಗಳು ಇದನ್ನು ಪರಿಗಣಿಸಿ ಅನುಮೋದನೆ ನೀಡಬೇಕೆಂದು ವಿನಂತಿಸಿದರು.
Key words: KSMCA, special dividend, Rs. 34.13 crore, government
The post KSMCA ಸಂಸ್ಥೆಯಿಂದ ಸರ್ಕಾರಕ್ಕೆ ವಿಶೇಷ ಲಾಭಾಂಶ ಮೊತ್ತ 34.13 ಕೋಟಿ ರೂ. ಚೆಕ್ ಹಸ್ತಾಂತರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





