ಮೈಸೂರು,ಅಕ್ಟೋಬರ್,17,2025 (www.justkannada.in): ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಗಣತಿಗೆ ಮಾಹಿತಿ ನೀಡುವುದಿಲ್ಲ ಎನ್ನುವ ಮೂಲಕ ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ ತಮ್ಮ ಜವಾಬ್ದಾರಿ ನಿರ್ವಹಿಸದಿರುವುದು ಖೇದಕರ ಸಂಗತಿ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಹಿರಿಯರ ಮನೆ ಎಂದು ಗುರುತಿಸಿಕೊಂಡಿರುವ ರಾಜ್ಯಸಭೆಯ ಸದಸ್ಯರಾಗಿರುವ ಸುಧಾ ಮೂರ್ತಿ, ತಮ್ಮ ಕುಟುಂಬದ ಮಾಹಿತಿ ನೀಡಿ ಮಾದರಿಯಾಗಬೇಕಿತ್ತು. ಆದರೆ ಸಮಾಜದ ದೃಷ್ಟಿಯಲ್ಲಿ ದೊಡ್ಡವರೆನಿಸಿಕೊಂಡವರು, ಇಂತಹ ಅಭಿಪ್ರಾಯವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ನೋವಿನಿಂದ ಹೇಳಬಹುದು.
ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಕರ್ನಾಟಕ ಸರ್ಕಾರ ನೀಡಿದ ರಿಯಾಯಿತಿ ದರದ ದೊಡ್ಡ ಪ್ರಮಾಣದ ಭೂಮಿಯಲ್ಲಿ ತಮ್ಮ ವ್ಯವಹಾರ ಆರಂಭಿಸಿ ಯಶಸ್ಸು ಕಂಡಿದ್ದಾರೆ. ವ್ಯವಹಾರಿಕ ಮತ್ತು ಕಾರ್ಪೊರೇಟ್ ತೆರಿಗೆಯ ಬಹುಪಾಲು ವಿನಾಯ್ತಿಯನ್ನೂ ಇವರ ಇನ್ಫೋಸಿಸ್ ಸಂಸ್ಥೆ ಪಡೆದುಕೊಂಡಿದೆ. ಈ ಉದ್ಯಮ ಸ್ಥಾಪನೆಗೆ ರೈತರು ಭೂಮಿ ನೀಡಿದ್ದಾರೆ, ಮೂಲಸೌಕರ್ಯವನ್ನು ಸರ್ಕಾರ ಒದಗಿಸಿದೆ. ಇವರ ಉದ್ಯಮ ಸಮಾಜ ಮತ್ತು ಸರಕಾರದ ಸಹಕಾರದಿಂದ ಬೆಳೆದು ನಿಂತಿದೆ ಎನ್ನುವುದು ಸತ್ಯ. ಆದರೆ ಈಗ ಈ ದಂಪತಿ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಭಾಗಿಯಾಗುವುದಿಲ್ಲ ನಾವು ಹಿಂದುಳಿದವರಲ್ಲ ಎಂದು ಹೇಳುವ ಮೂಲಕ ಒಂದರ್ಥದಲ್ಲಿ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ದ್ರೋಹವೆಸಗಿದ್ದಾರೆ ಎನ್ನಬಹುದು. ಸರ್ಕಾರದ ಯೋಜನೆಗಳು ಎಲ್ಲರಿಗೂ ಸಮರ್ಪಕವಾಗಿ ದಕ್ಕಲು ಜನ ಸಮುದಾಯಗಳ ನಿಖರ ಅಂಕಿ ಅಂಶ ಅರಿಯಬೇಕಾದ್ದು ಅನಿವಾರ್ಯ. ಈ ಹಿನ್ನಲೆಯಲ್ಲಿ ನ್ಯಾಯಾಲಯ ಮತ್ತು ಆಡಳಿತಾಂಗದ ನೀತಿ ನಿರ್ದೇಶನದಂತೆ ಕಾಲಕ್ಕನುಗುಣವಾಗಿ ಇಂತಹ ಸಮೀಕ್ಷೆ ನಡೆಯುತ್ತದೆ. ಸುಧಾ ಮೂರ್ತಿ ದಂಪತಿ ಇಂತಹ ನೀತಿ ನಿರ್ದೇಶನ ಉಲ್ಲಂಘಿಸುವುದು ಆಕ್ಷೇಪಾರ್ಹ ಎಂದು ಎಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.
ಸಾಮಾಜಿಕ ಜೀವನದಲ್ಲಿ ನೈತಿಕತೆ ಉಳಿಸಿಕೊಳ್ಳುವುದು ಉನ್ನತವಾದುದು. ಎಲ್ಲರೊಡನೆ ಬದುಕಿ ಬಾಳುವಾಗ ಭಾರತದ ಪ್ರತಿ ಪ್ರಜೆಗೂ ಸಂವಿಧಾನಾತ್ಮಕ ನೈತಿಕತೆ ಪ್ರಮುಖವಾದುದು. ಸಮಾಜದಲ್ಲಿ ನಾವು ಎತ್ತರದಲ್ಲಿದ್ದೇವೆ ಎಂದು ಭಾವಿಸುವವರು ಇಂತಹ ಸಂವಿಧಾನಿಕ ನೈತಿಕತೆಯನ್ನೂ ಸಹ ಕಾಪಾಡಿಕೊಳ್ಳುವುದು ಅನಿವಾರ್ಯ. ಯೋಜನೆ ರೂಪಿಸಲೆಂದು ಸರ್ಕಾರ ಕೋರುವ ಮಾಹಿತಿಯನ್ನು ನೀಡುವುದಿಲ್ಲ ಎನ್ನುವುದು ಕೆಳ ಮಟ್ಟದ ರಾಜಕೀಯವಷ್ಟೇ. ಸುಧಾಮೂರ್ತಿ ದಂಪತಿಯ ಇಂತಹ ನಡವಳಿಕೆಯು ಇವರ ಮಾತು ಮತ್ತು ಕೃತಿಯ ನಡುವೆ ಬಹಳಷ್ಟು ಅಂತರವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ ಎಂದು ಸುಧಾಮೂರ್ತಿ ಅವರ ನಡೆಗೆ ಹೆಚ್.ಎ ವೆಂಕಟೇಶ್ ಆಕ್ಷೇಪಿಸಿದ್ದಾರೆ.
Key words: Caste Census, Sudhamurthi, KPCC, HA Venkatesh
The post ಸುಧಾಮೂರ್ತಿ ತಮ್ಮ ಜವಾಬ್ದಾರಿ ನಿರ್ವಹಿಸದಿರುವುದು ಖೇದಕರ ಸಂಗತಿ- ಹೆಚ್.ಎ ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





