ಮೈಸೂರು ಸೆಪ್ಟಂಬರ್, 22,2025 (www.justkannada.in): ಪ್ರಧಾನಿ ನರೇಂದ್ರ ಮೋದಿ ಬರೀ ಡೋಂಗಿ. GST ಜಾರಿ ಮಾಡಿದ್ದೂ ಮೋದಿ. GST ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಂಟು ವರ್ಷ ವಿಪರೀತ GST ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಭಾರತೀಯರಿಗೆ ವಾಪಾಸ್ ಕೊಡುತ್ತೀರಾ ಎಂದು ಪ್ರಶ್ನಿಸಿದರು.
GST 18%, 28% ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕುತ್ತಾರೆ ನೋಡಿ. ನೀವು ಇದಕ್ಕೆಲ್ಲಾ ಮರಳಾಗಬಾರದು ಎಂದರು.
ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದು 10 ಕೆಜಿ ಅಕ್ಕಿ ಕೊಟ್ಟಿದ್ದೇ ಈ ಸಿದ್ದರಾಮಯ್ಯ ಎಂದು ನುಡಿದರು.
ಮಾಜಿ ಸಂಸದರಿಗಿಂತ ನಾನು ಉತ್ತಮ ಹಿಂದೂ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಿದವರಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಚಾಟಿ ಬೀಸಿದ್ದನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, “ನನ್ನ ಹೆಸರಲ್ಲೇ ಇಬ್ಬರು ದೇವರಿದ್ದಾರೆ. ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು” ಹೀಗಾಗಿ ಬಾನು ಮುಷ್ತಾಕ್ ಗೆ ವಿರೋಧ ವ್ಯಕ್ತಪಡಿಸಿದ ಮೂರ್ಖರಿಗೆ ಸುಪ್ರೀಂಕೋರ್ಟ್ , ಸಂವಿಧಾನದ ಪೀಠಿಕೆ ಓದಲು ಹೇಳಿದೆ ಎಂದರು.
ಬಾನು ಮುಷ್ತಾಕ್ ಅವರಿಗೆ ಎರಡು ಬಾರಿ ಸಂಸದರಾಗಿದ್ದವರು ವಿರೋಧ ವ್ಯಕ್ತಪಡಿಸಿದ್ದರು. ದಸರಾ ನಾಡ ಹಬ್ಬ ಎನ್ನುವುದೂ ಕೂಡ ಗೊತ್ತಿಲ್ಲ ಅವರಿಗೆ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೋಗಿ ಸೋತರು. ನನ್ನ ಹಸರಲ್ಲೇ ಇಬ್ಬರು ದೇವರನ್ನು ಹೊಂದಿರುವ ನಾನು ಅವರಿಗಿಂತ ಉತ್ತಮ ಹಿಂದು ಎಂದರು.
Key words: Mysore dasara, Food fair, CM Siddaramaiah, PM Modi
The post GST ಜಾರಿ ಮಾಡಿ, ಹೆಚ್ಚೆಚ್ಚು GST ವಿಧಿಸಿದ್ದೂ ಅವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ- ಸಿಎಂ ಸಿದ್ದರಾಮಯ್ಯ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





