15
March, 2026

A News 365Times Venture

15
Sunday
March, 2026

A News 365Times Venture

ಹೂಡಿಕೆದಾರರ ಸಮಾವೇಶಕ್ಕೆ `ಅರ್ಥಪೂರ್ಣ’ ತೆರೆ: ಹೂಡಿಕೆಗೆ ತಕ್ಕ ಸಂದೇಶ ರವಾನೆ

Date:

ಬೆಂಗಳೂರು,ಫೆಬ್ರವರಿ,14,2025 (www.justkannada.in):  ಕಳೆದ ಮೂರು ದಿನಗಳಿಂದ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ `ಜಾಗತಿಕ ಹೂಡಿಕೆದಾರರ ಸಮಾವೇಶ’ಕ್ಕೆ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ತೆರೆ ಬಿತ್ತು. 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣಿತರು ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಟ್ಟದ ನೀತಿ ನಿರೂಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದ ಸಮಾವೇಶವು ಬಂಡವಾಳ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ತಾಣ ಎನ್ನುವ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಯಿತು.

ಗಣ್ಯಾತಿಗಣ್ಯರು ಮತ್ತು ರಾಜ್ಯ ಸಚಿವ ಸಂಪುಟದ ಹತ್ತಾರು ಸಚಿವರು ಹಾಜರಿದ್ದ ಸಮಾರೋಪ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು 2025-30ರ ಅವಧಿಯವರೆಗಿನ ಪರಿಸರಸ್ನೇಹಿ ಸಾರಿಗೆ ನೀತಿಯನ್ನು ಬಿಡುಗಡೆಗೊಳಿಸಿದರು. ಜತೆಗೆ ಇದೇ ವೇದಿಕೆಯಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉದ್ಯಮ ಸಂಸ್ಥೆಗಳಿಗೆ `ವೆಂಚುರೈಸ್ ಚಾಲೆಂಜ್’ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಇದೇ ಪ್ರಥಮ ಬಾರಿಗೆ ಸಾಧಕ ಕಂಪನಿಗಳಿಗೆ `ಇನ್ವೆಸ್ಟ್ ಕರ್ನಾಟಕ’, ಎಸ್ಎಂಇ ಕನೆಕ್ಟ್, ವೆಂಚುರೈಸ್ ಚಾಲೆಂಜ್ ಪುರಸ್ಕಾರಗಳನ್ನು ಪ್ರದಾನ ಮಾಡಿದ್ದು, ಈ ಸಮಾವೇಶದ ವಿಶೇಷವಾಗಿತ್ತು.

ಸಚಿವ ಎಂ.ಬಿ ಪಾಟೀಲ್ ಮಾತನಾಡಿ, `ಮೂರು ವರ್ಷಗಳ ನಂತರ ನಡೆದ ಹೂಡಿಕೆದಾರರ ಸಮಾವೇಶವು ಒಂದು ನಿರ್ಣಾಯಕ ಉದ್ದೇಶದೊಂದಿಗೆ ನಡೆದಿದೆ. ನಾವು ಕೈಗಾರಿಕಾ ಬೆಳವಣಿಗೆಯ ಸಾಂಪ್ರದಾಯಿಕ ಮಾದರಿಗಳಿಂದ ಹೊರಬಂದು, ಆಧುನಿಕ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ಬೆಳೆಸಲು ಸಿದ್ಧವಾಗಿದ್ದೇವೆ ಎನ್ನುವ ನಮ್ಮ ಇಚ್ಛಾಶಕ್ತಿಯನ್ನು ನಾವು ತೋರಿದ್ದೇವೆ. ಇದಕ್ಕೆ ತಕ್ಕಂತೆ ನೂತನ ಕೈಗಾರಿಕಾ ನೀತಿ, ಪರಿಸರಸ್ನೇಹಿ ಸಾರಿಗೆ ನೀತಿ, ಎಐ ಆಧರಿತ ಏಕಗವಾಕ್ಷಿ ಪೋರ್ಟಲ್ ಮುಂತಾದವುಗಳನ್ನು ಹೂಡಿಕೆದಾರರಿಗೆ ಕೊಡುಗೆಯಾಗಿ ನೀಡಿದ್ದೇವೆ. ಸಮಾವೇಶದ ಯಶಸ್ಸಿಗೆ ಹೆಗಲು ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿದರು.

ಈ ಸಮಾವೇಶವು ಹತ್ತರ ಜೊತೆಗೆ ಇನ್ನೊಂದು ಎನ್ನುವಂತೆ ನಡೆಯುವುದಿಲ್ಲ. ಇದರಲ್ಲಿ ಹೊಸತನವಿರುತ್ತದೆ, ಬೆಳವಣಿಗೆಯ ಮರುಪರಿಕಲ್ಪನೆ ಇರಲಿದೆ ಎಂದ ಸಚಿವ ಎಂ.ಬಿ ಪಾಟೀಲ್, ಇದುವರೆಗೆ ಹೇಳಿಕೊಂಡು ಬರುತ್ತಿದ್ದ ಮಾತು ಕಳೆದ ಮೂರು ದಿನಗಳಲ್ಲಿ ಸಾಕಾರಗೊಂಡಿತ್ತು. ಇದರಿಂದ ಸಂತೃಪ್ತರಾಗಿದ್ದ ಅವರು, ತಮ್ಮ ಮಾತುಗಳಲ್ಲಿ ಪೊಲೀಸ್ ಪೇದೆಗಳ ಸಹಕಾರದಿಂದ ಹಿಡಿದು ಕೇಂದ್ರ ಸಚಿವರವರೆಗೆ ಪ್ರತಿಯೊಬ್ಬರನ್ನೂ ಸ್ಮರಿಸಿ, ಧನ್ಯವಾದ ಸಮರ್ಪಿಸಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಚಾಲನೆ ಪಡೆದ ಸಮಾವೇಶವು 75 ಗೋಷ್ಠಿಗಳು, ಹತ್ತಾರು ಉದ್ಯಮಗಳು ಮತ್ತು ಸರಕಾರದ ನಡುವಿನ ಸಭೆಗಳು, ಲಕ್ಷಾಂತರ ಕೋಟಿ ಹೂಡಿಕೆಯನ್ನು ಹೊತ್ತು ತರಲಿರುವ ಒಡಂಬಡಿಕೆಗಳು, ಕ್ವಿನ್ ಸಿಟಿ ಅಭಿವೃದ್ಧಿ ಕುರಿತ ವಿಚಾರ ವಿನಿಮಯಗಳಿಗೆ ಸಾಕ್ಷಿಯಾಯಿತು.

ಜತೆಗೆ 19 ದೇಶಗಳ ರಾಯಭಾರಿಗಳು, ಕಾನ್ಸುಲ್ ಜನರಲ್ ಗಳು, ಉದ್ಯಮ ಸಂಘಟನೆಗಳ ಉನ್ನತ ಪ್ರತಿನಿಧಿಗಳು, ಜಾಗತಿಕ ಮಟ್ಟದ ಕಂಪನಿಗಳ ಸಿಇಒ ಮತ್ತು ಅಧ್ಯಕ್ಷರ ಜತೆ ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಭೇಟಿಯೂ ಸಾಂಗವಾಗಿ ನಡೆಯಿತು. 9 ದೇಶಗಳಿಗೆ ಸಮಾವೇಶದಲ್ಲಿ ಪ್ರತ್ಯೇಕ ಪೆವಿಲಿಯನ್ ಗಳನ್ನೇ ನೀಡಲಾಗಿತ್ತು. ಜೊತೆಗೆ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ವಾಗ್ದಾನವನ್ನೂ ಸಮಾವೇಶದಲ್ಲಿ ಕಾಣಲು ಸಾಧ್ಯವಾಯಿತು.

ಕಾರ್ಯಕ್ರಮದಲ್ಲಿ ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪ್ರಪೆರಾಂಡೋ, ಸಂಸದ ಶಶಿ ತರೂರ್, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಎಚ್ .ಕೆ ಪಾಟೀಲ, ಮಂಕಾಳ ವೈದ್ಯ, ಆರ್. ಬಿ ತಿಮ್ಮಾಪುರ, ಈಶ್ವರ ಖಂಡ್ರೆ, ಎಂ.ಸಿ ಸುಧಾಕರ್, ಶಿವರಾಜ ತಂಗಡಗಿ, ರಹೀಂ ಖಾನ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮುಂತಾದವರು ಉಪಸ್ಥಿತರಿದ್ದರು.

287 ಕಿ.ಮೀ. ವರ್ತುಲ ರೈಲ್ವೆ ಡಿಪಿಆರ್ ಸಿದ್ಧ: ಕೇಂದ್ರ ಸಚಿವ ಸೋಮಣ್ಣ

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ, `ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಸುಗಮ ಸಂಚಾರ ವ್ಯವಸ್ಥೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೀಳಲಿಗೆ ಮುಂತಾದ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸುವ 287 ಕಿ.ಮೀ. ಉದ್ದದ ವರ್ತುಲ ರೈಲು ಯೋಜನೆಗೆ ಡಿಪಿಆರ್ ಅಂತಿಮ ಹಂತದಲ್ಲಿದೆ. ದೇವನಹಳ್ಳಿಯಲ್ಲಿ ಮೆಗಾ ರೈಲ್ವೆ ಟರ್ಮಿನಲ್ ಕೂಡ ಅಸ್ತಿತ್ವಕ್ಕೆ ಬರಲಿದೆ. ಒಟ್ಟಾರೆ ರಾಜ್ಯದಲ್ಲಿ ರೈಲ್ವೆ ಜಾಲವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸಲಾಗುತ್ತಿದ್ದು, ಈ ವರ್ಷ 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಡಲಾಗಿದೆ. 2030ರ ವೇಳೆಗೆ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ ಆಗಲಿದೆ ಎಂದರು.

ರಾಜ್ಯದಲ್ಲಿ ಕೇಂದ್ರದ ಸಹಯೋಗದೊಂದಿಗೆ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಯು 2027ರ ಕೊನೆಯ ಹೊತ್ತಿಗೆ ಮುಗಿಯುವ ನಿಚ್ಚಳ ಲಕ್ಷಣಗಳು ಕಾಣುತ್ತಿವೆ. ಜಿಲ್ಲಾ ಕೇಂದ್ರಗಳ ಹೊರವಲಯದಲ್ಲಿ ಭೂಮಿ, ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಿದರೆ ಕೈಗಾರಿಕಾ ಬೆಳವಣಿಗೆ ಮೂರು ಪಟ್ಟು ಹೆಚ್ಚಾಗಲಿದೆ. ಉದ್ಯಮಿಗಳು ಕೋಲಾರ, ತುಮಕೂರು, ಚಾಮರಾಜನಗರ, ಮೈಸೂರು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕಗಳ ಕಡೆಗೂ ಹೋಗಿ, ಬಂಡವಾಳ ಹೂಡಬೇಕು. ರಾಜ್ಯ ಮತ್ತು ಕೇಂದ್ರಗಳು ರೂಪಿಸಿರುವ ಕೈಗಾರಿಕಾ ನೀತಿಗಳು ಇದಕ್ಕೆ ಪೂರಕವಾಗಿಯೇ ಇವೆ ಎಂದು ಅವರು ವಿವರಿಸಿದರು.

ಎಂ.ಬಿ ಪಾಟೀಲರಿಗೆ ಮೆಚ್ಚುಗೆಯ ಸುರಿಮಳೆ

ಸಮಾರೋಪದಲ್ಲಿ ಮಾತನಾಡಿದ ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪ್ರೊಪೆಂಡ್ರಿಯೂ, ಸಂಸದ ಶಶಿ ತರೂರ್, ಕೇಂದ್ರ ಸಚಿವ ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೆಲ್ಲರೂ ಸಮಾವೇಶದ ಯಶಸ್ಸಿಗೆ ನಿರಂತರ 6-7 ತಿಂಗಳ ಕಾಲ ಶ್ರಮಿಸಿದ ಸಚಿವ ಎಂ.ಬಿ ಪಾಟೀಲ ಅವರನ್ನು ಮನದುಂಬಿ ಶ್ಲಾಘಿಸಿದರು.

ಪ್ರೊಪೆಂಡ್ರಿಯೂ ಅವರು ಮಾತನಾಡಿ, `ಯೂರೋಪಿನ ದೇಶಗಳು ಸದ್ಯಕ್ಕೆ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅಲ್ಲಿ ಬೆಳವಣಿಗೆಗೆ ದೊಡ್ಡ ಸವಾಲು ಎದುರಾಗಿದೆ. ಆದರೆ, ಒಟ್ಟಾರೆಯಾಗಿ ಭಾರತ ಮತ್ತು ನಿರ್ದಿಷ್ಟವಾಗಿ ಕರ್ನಾಟಕ ಈ ಸವಾಲನ್ನು ಮೆಟ್ಟಿ ನಿಂತಿರುವುದು ಶ್ಲಾಘನೀಯ. ಕರ್ನಾಟಕದ ಕೈಗಾರಿಕಾ ಮತ್ತು ಇತರ ನೀತಿಗಳು ಹೂಡಿಕೆಗೆ ಮೇಲ್ಪಂಕ್ತಿಯಾಗಿವೆ’ ಎಂದರು.

Key words: GIM Invest Karnataka,  ‘Meaningful, investors,  conference

The post ಹೂಡಿಕೆದಾರರ ಸಮಾವೇಶಕ್ಕೆ `ಅರ್ಥಪೂರ್ಣ’ ತೆರೆ: ಹೂಡಿಕೆಗೆ ತಕ್ಕ ಸಂದೇಶ ರವಾನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പൂനെയില്‍ പൊതുസ്ഥലത്ത് നോമ്പ് തുറക്കുന്നത് ചോദ്യം ചെയ്ത് യുവാക്കളെ ആക്രമിച്ചു; അഞ്ച് പേര്‍ക്ക് പരിക്ക്; 15 പേര്‍ പിടിയില്‍

പൂനെ: പൂനെ അക്‌സര്‍വാഡിയില്‍ കുളത്തിനരികെ നോമ്പ് തുറയ്ക്കായി ഒത്തുകൂടിയ മുസ്‌ലിം യുവാക്കളെ...

“உளவுத் துறையைக் கையாளப் போகும் முதல் பெண் டி.ஜி.பி”- அதிரடி மாற்றங்களைக் கையில் எடுத்த அரசு!

தமிழகத்தில் கடந்த சில நாட்களாக நடந்துவந்த குற்றசெயல்களும், அதை தொடர்ந்து...

Fatty Liver: ఫ్యాటీలివర్ సమస్యతో బాధపడుతున్నారా..? మందులతో పని లేకుండా తగ్గించుకోండిలా..

కాలేయం మన శరీరంలోని అత్యంత కీలకమైన అవయవం. ఇది విషతుల్యాలను తొలగించడం,...