ಬೆಂಗಳೂರು ಅಕ್ಟೋಬರ್,10,2025 (www.justkannada.in): ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಮಸ್ತ ಜನರಿಗೆ ಸುಗಮ ಆಡಳಿತ, ಸಮರ್ಪಕ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ಐದು ಕಾರ್ಪೋರೇಷನ್ ಗಳು ರಚನೆಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಆರಂಭಿಕ ಮಾತುಗಳಲ್ಲಿ GBA ರಚನೆ ಹಿಂದಿನ ಉದ್ದೇಶಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆಗಳನ್ನು ನೀಡಿದರು.
ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಿದೆ. ಒಂದು ಕಾರ್ಪೋರೇಷನ್ ನಿಂದ ಇಷ್ಟು ದೊಡ್ಡ ನಗರದ ಸಮರ್ಪಕ ಅಭಿವೃದ್ಧಿ ಬಹಳ ದೊಡ್ಡ ಸವಾಲಿನದ್ದು. ಈ ಚರ್ಚೆ ಹಲವು ವರ್ಷಗಳಿಂದ ಇದ್ದೇ ಇದೆ. ಒಂದಕ್ಕಿಂತ ಹೆಚ್ಚು ಕಾರ್ಪೋರೇಷನ್ ಗಳಿದ್ದರೆ ಅಭಿವೃದ್ಧಿ ಸಾಧ್ಯ ಎನ್ನುವ ಕಾರಣಕ್ಕೆ ಈ ಬಗ್ಗೆ ವರದಿ ಕೊಡಲು ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಸಮಿತಿ ರಚಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಈ ದಿಕ್ಕಿನಲ್ಲಿ ಗಮನ ಹರಿಸಲೇ ಇಲ್ಲ. ಹೀಗಾಗಿ ನಮ್ಮ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದ ಬಳಿಕ ಸಮಿತಿಯನ್ನು ಪುನರ್ ರಚಿಸಲಾಯಿತು. ಈ ಸಮಿತಿ ವರದಿಯಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 5 ನಗರ ಪಾಲಿಕೆಗಳ ರಚನೆಯಾಗಿವೆ ಎಂದರು.
ಸುಗಮ ಕಸ ವಿಲೇವಾರಿ ಆಗಬೇಕು. ಪಾಲಿಕೆಗಳ ಆದಾಯ ಹೆಚ್ಚಳ ಆಗಬೇಕು. ಟ್ರಾಫಿಕ್ ದಟ್ಟಣೆ ನಿವಾರಣೆ ಆಗಬೇಕು. ನಗರವನ್ನು ಚೊಕ್ಕವಾಗಿಡಬೇಕು. ರಸ್ತೆ/ಚರಂಡಿ/ಫುಟ್ಪಾತ್/ಪಾರ್ಕ್ ಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಮಾದರಿ ಪಾಲಿಕೆಗಳನ್ನಾಗಿ ರೂಪಿಸಬೇಕು ಎನ್ನುವ ಮಹತ್ತರ ಗುರಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ನಾವು ನಿರೀಕ್ಷೆ ಮಾಡಿರುವ ಈ ಗುರಿ ಮತ್ತು ಉದ್ದೇಶ ನೆರವೇರಲು BWSSB, BDA, BESCOM ಸೇರಿ ಎಲ್ಲಾ ಇಲಾಖೆಗಳು GBA ಜೊತೆ ಪರಸ್ಪರ ಸಹಕಾರ ಸಹಯೋಗವನ್ನು ಅತ್ಯಂತ ಕಡ್ಡಾಯವಾಗಿ ಆಚರಣೆಗೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು.
ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧ: ಕುಟುಕಿದ ಸಿಎಂ
ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಏನೇ ವಿರೋಧಗಳಿದ್ದರೂ ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕು. ಅಧಿಕಾರ ವಿಕೇಂದ್ರೀಕರಣವನ್ನು ವಿರೋಧಿಸುವವರು ಮತ್ತು ಬೆಂಗಳೂರಿನ ಅಭಿವೃದ್ಧಿ ಒಲ್ಲದವರು ಸಭೆಯನ್ನು ವಿರೋಧಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಕುಟುಕಿದರು.
Key words: GBA, governance, proper, development, Bengaluru, CM Siddaramaiah
The post ಬೆಂಗಳೂರು ಜನರಿಗೆ ಸುಗಮ ಆಡಳಿತ, ಸಮರ್ಪಕ ಅಭಿವೃದ್ಧಿಗಾಗಿ GBA ಅಸ್ತಿತ್ವಕ್ಕೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





